ಢಾಯಿ ಆಖರ್ ಪ್ರೇಮ್ ಎಂಬ ಘೋಷಣೆಯಡಿಯಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾವು ಡಿಸೆಂಬರ್ 2, 2023 ರಿಂದ ಡಿಸೆಂಬರ್ 7, 2023 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರವಾದ ಮಂಗಳೂರಿನಿಂದ ಗಡಿಯಾಚೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದವರೆಗೆ ನಡೆಯಿತು. ಆರು ದಿನಗಳ ಜಾಥಾವು ಅತ್ಯಂತ ಯಶಸ್ವಿಯಾಗಿ ನಡೆಯಿತು, ನಿರೀಕ್ಷೆಗೂ ಹೆಚ್ಚಿನದನ್ನು ಸಾಧಿಸಿತು. ಶಾಂತಿಯುತವಾಗಿ ನಡೆದ ಯಾತ್ರೆಯಲ್ಲಿ ಎಲ್ಲಾ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸ್ತರಗಳವರೂ ಉತ್ಸಾಹದಿಂದ ಭಾಗವಹಿಸುವುದರೊಂದಿಗೆ ಢಾಯಿ ಆಖರ್ ಪ್ರೇಮ್ (ಪ್ರೀತಿಗೆ ಎರಡೂವರೆ ಅಕ್ಷರಗಳಷ್ಟೇ) ಎಂಬ ಧ್ಯೇಯವಾಕ್ಯವು ಸಾಕಾರಗೊಂಡಿತು.
ಈಗಿನ ದಕ್ಷಿಣ ಕನ್ನಡ ಜಿಲ್ಲೆಯು ಬ್ರಿಟಿಷರ ಆಳ್ವಿಕೆಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಗೆ ಒಳಪಟ್ಟಿದ್ದ ಹಿಂದಿನ ಸೌತ್ ಕೆನರಾ ಜಿಲ್ಲೆಯ ಭಾಗವಾಗಿತ್ತು. ಆಗಿನ ಸೌತ್ ಕೆನರಾ ಜಿಲ್ಲೆಯು ದಕ್ಷಿಣಕ್ಕೆ ಈಗ ಕೇರಳ ರಾಜ್ಯದ ಕಾಸರಗೋಡಿನಲ್ಲಿರುವ ಪಯಸ್ವಿನಿ ನದಿಯಿಂದ, ಉತ್ತರಕ್ಕೆ ಈಗಿನ ಉಡುಪಿ ಜಿಲ್ಲೆಯ ಭಾಗವಾಗಿರುವ ಕುಂದಾಪುರದವರೆಗೆ ವಿಸ್ತರಿಸಿತ್ತು. ಆ ಸೌತ್ ಕೆನರಾ ಜಿಲ್ಲೆಯು ಕನ್ನಡ, ತುಳು, ಮಲಯಾಳಂ ಮತ್ತು ಕೊಂಕಣಿ ಭಾಷೆಗಳ ಸಂಗಮವಾಗಿತ್ತು ಮತ್ತು ಈ ಭಾಷೆಗಳನ್ನು ಮಾತನಾಡುವ ಜನರ ಅತ್ಯಂತ ಶ್ರೀಮಂತ ಸಂಪ್ರದಾಯಗಳು, ಆಚರಣೆಗಳು ಮತ್ತು ಪಾಕಪದ್ಧತಿಗಳಿಗೆ ಹೆಸರುವಾಸಿಯಾಗಿತ್ತು. ಈಗಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕೂಡಾ ‘ಬುದ್ಧಿವಂತರ ಜಿಲ್ಲೆಗಳು’ ಎಂದೇ ಹೆಮ್ಮೆಪಡುತ್ತಲೇ ಇವೆ ಮತ್ತು ಸ್ವಾತಂತ್ರ್ಯಪೂರ್ವ ಕಾಲದಿಂದ ಇಲ್ಲಿಯವರೆಗೆ ಶಿಕ್ಷಣ, ಬ್ಯಾಂಕಿಂಗ್, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ, ಕೈಗಾರಿಕೀಕರಣ, ಮತ್ತು ಬಹು ಸಂಸ್ಕೃತಿಗಳು, ಭಾಷೆಗಳು ಮತ್ತು ಸಮುದಾಯಗಳ ಸಹಬಾಳ್ವೆ, ಸೌಹಾರ್ದತೆ ಮತ್ತು ಸಾಮರಸ್ಯಗಳಿಗೆ ಹೆಸರಾಗಿವೆ. ಆದರೆ ದುಃಖಕರವೆಂದರೆ ಕಳೆದ 2 ದಶಕಗಳಲ್ಲಿ ಜಿಲ್ಲೆಗಳಲ್ಲಿ ಕೋಮು ರಾಜಕೀಯದ ಉಲ್ಬಣವು ಜಿಲ್ಲೆಗಳ ಪ್ರತಿಷ್ಠೆಯನ್ನು ಹಾಳುಮಾಡಿದೆ; ‘ನೈತಿಕ ಪೋಲೀಸುಗಿರಿ’’ ನೆಪದಲ್ಲಿ ಯುವಜನರ ಮೇಲೆ ಪದೇ ಪದೇ ದಾಳಿಗಳು, ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಪ್ರಚೋದನೆ, ಮತ್ತು ವೃತ್ತಿಪರರು ಹಾಗೂ ಮಾಧ್ಯಮ ಪ್ರತಿನಿಧಿಗಳ ನಡುವೆಯೂ ಕೋಮು ಧ್ರುವೀಕರಣ ಹಾಗೂ ಹೆಚ್ಚುತ್ತಿರುವ ಮೂಲಭೂತವಾದಗಳಿಂದಾಗಿ ಈ ಜಿಲ್ಲೆಗಳಲ್ಲೀಗ ಪ್ರಗತಿಶೀಲ ಮತ್ತು ಜಾತ್ಯತೀತ ಕಾರ್ಯಚಟುವಟಿಕೆಗಳು ಗಮನಾರ್ಹವಾಗಿ ನಿರ್ಬಂಧಿಸಲ್ಪಡುತ್ತಿವೆ.
ಇಂಥ ಸನ್ನಿವೇಶದಲ್ಲಿ ಢಾಯಿ ಆಖರ್ ಪ್ರೇಮ್ ಸಾಂಸ್ಕೃತಿಕ ಜಾಥಾದ ಕರ್ನಾಟಕದ ಭಾಗವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುವ ನಿರ್ಧಾರವು ಒಂದೆಡೆ ಜಿಲ್ಲೆಯ ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು ಪರಿಗಣಿಸಿದ್ದಕ್ಕೆ ಗೌರವದ ಭಾವನೆಯನ್ನು ಹುಟ್ಟುಹಾಕಿದೆರೆ, ಇನ್ನೊಂದೆಡೆ, ಈ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಕಾರ್ಯಕರ್ತರ ಸಂಖ್ಯೆಯೂ, ಸಾಮರ್ಥ್ಯವೂ ಕ್ಷೀಣಿಸಿವೆಯೇನೋ ಎಂಬ ಆತಂಕವನ್ನೂ ಹುಟ್ಟಿಸಿದ್ದು ಸುಳ್ಳಲ್ಲ. ಆದರೆ ಈ ಸವಾಲನ್ನು ಒಪ್ಪಿಕೊಂಡಾಗ ಯಾರ ನೆರವನ್ನೆಲ್ಲ ನಿರೀಕ್ಷಿಸಲಾಗಿತ್ತೋ ಅವರಲ್ಲಿ ಪ್ರತಿಯೊಬ್ಬರೂ ಬೆಂಬಲವಾಗಿ ನಿಂತರು ಮತ್ತು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಜೊತೆಗೂಡಿ ನೆರವಾದರು, ಅದರಿಂದಾಗಿಯೇ ಈ ಜಾಥಾವನ್ನು ಅತ್ಯಂತ ಯಶಸ್ವಿಯಾದ, ಐತಿಹಾಸಿಕ ಘಟನೆಯನ್ನಾಗಿ ಮಾಡಲು ಸಾಧ್ಯವಾಯಿತು ಎನ್ನುವುದು ಬಹಳ ವಿನಮ್ರತೆಯ, ಅತ್ಯಂತ ತೃಪ್ತಿಯ ಮತ್ತು ಉತ್ತೇಜಕಾರಿಯಾದ ಅನುಭವವಾಗಿದೆ ಎಂದು ಹೇಳಲೇಬೇಕಾಗಿದೆ.
ದಕ್ಷಿಣ ಕನ್ನಡದಲ್ಲಿ ಕರ್ನಾಟಕದ ಜಾಥಾವನ್ನು ಆಯೋಜಿಸುವಾಗ ಜಿಲ್ಲೆಯ ಶ್ರೀಮಂತ ಇತಿಹಾಸ, ಪರಂಪರೆ, ಸಂಸ್ಕೃತಿ, ಆಚರಣೆಗಳು, ಪಾಕಪದ್ಧತಿಗಳು, ರಮಣೀಯ ಸ್ಥಳಗಳು ಮತ್ತು ಜಿಲ್ಲೆಯ ಖ್ಯಾತನಾಮರ ಸ್ಮರಣೆಗಳು ಎಲ್ಲವನ್ನೂ ಒಳಗೊಳ್ಳಬೇಕೆಂಬ ಆಶಯದೊಂದಿಗೆ ಮುಂದಡಿಯಿಡಲಾಯಿತು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಹಾಗೂ ಲೇಖಕಿ, ಚಿಂತಕಿ, ಪ್ರಗತಿಪರ ಮತ್ತು ಮಹಿಳಾಪರ ಹೋರಾಟಗಾರ್ತಿ ಡಾ.ಸಬಿಹಾ ಭೂಮಿಗೌಡ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಮಿತಿಯಲ್ಲಿ 45 ಕ್ಕೂ ಹೆಚ್ಚು ಬುದ್ಧಿಜೀವಿಗಳು, ಶಿಕ್ಷಣ ತಜ್ಞರು, ವಿದ್ವಾಂಸರು, ಬರಹಗಾರರು, ಚಿಂತಕರು, ಕಲಾವಿದರು ಇದ್ದರು, ಮತ್ತು ಪ್ರಕಾಶಕರೂ, ಲೇಖಕರೂ ಆದ ನಾಗೇಶ್ ಕಲ್ಲೂರು ಕಾರ್ಯದರ್ಶಿಯಾಗಿದ್ದರು, ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸಂಯೋಜಕರಾಗಿ ನಿಯುಕ್ತರಾದರು.
ದಕ್ಷಿಣ ಕನ್ನಡದಲ್ಲಿ ನಡೆಯಬೇಕಿದ್ದ ಜಾಥಾಕ್ಕೆ ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ ಎಂದು ಹೆಸರಿಡಲಾಯಿತು. ರಾಷ್ಟ್ರೀಯ ಜಾಥಾದ ಢಾಯಿ ಆಖರ್ ಪ್ರೇಮ್ ಧ್ಯೇಯವಾಕ್ಯದ ಜೊತೆಗೆ ತುಳುನಾಡಿನ ದೈವಗಳ ‘ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್’ ಎಂಬ ಆಶಯ ನುಡಿಗಳನ್ನೂ ಸೇರಿಸಲಾಯಿತು. ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್ ಎಂದರೆ ಹತ್ತು ತಾಯಂದಿರ ಮಕ್ಕಳು ಒಂದೇ ಮಡಿಲಲ್ಲಿ ಬನ್ನಿ, ಎಲ್ಲಾ ಧರ್ಮಗಳು ಮತ್ತು ಪಂಗಡಗಳು ಮತ್ತು ಭಾಷೆಗಳ ಎಲ್ಲಾ ಜನರನ್ನು ಒಗ್ಗೂಡಿಸಿ ಮತ್ತು ರಕ್ಷಿಸೋಣ ಎಂಬ ಆಶಯವಾಗಿದೆ. ಯಾತ್ರೆಯ ಲಾಂಛನಕ್ಕಾಗಿ, ಸ್ಥಳೀಯ ಸ್ವಾಗತ ಸಮಿತಿಯು ಮೂಲ ಲಾಂಛನದೊಳಗೆ ಭಗತ್ ಸಿಂಗ್, ಮಹಾತ್ಮ ಗಾಂಧಿ ಮತ್ತು ಕಬೀರ್ ಅವರ ಜೊತೆಗೆ ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟಾಗೋರ್ ಅವರನ್ನು ಪ್ರೇರೇಪಿಸಿದ ಪ್ರಸಿದ್ಧ ಸಂತ, ತತ್ವಜ್ಞಾನಿ ಮತ್ತು ಕವಿ ಶ್ರೀ ನಾರಾಯಣ ಗುರುಗಳ ಚಿತ್ರವನ್ನೂ ಸೇರಿಸಿತು.
ನಮ್ಮ ಯಾತ್ರೆಯ ಯೋಜನೆಯು ಮುಂದುವರಿದಂತೆ, ನಾವು ಭೇಟಿ ನೀಡಲು ಯೋಜಿಸಿದ ಪ್ರತಿಯೊಂದು ಸ್ಥಳದ ಕಾರ್ಯಕ್ರಮಗಳೂ ಇನ್ನಷ್ಟು ಚಂದಗೊಳ್ಳುತ್ತಲೇ ಸಾಗಿದವು. ಸ್ವಾಗತ ಸಮಿತಿಯ ಸದಸ್ಯರೆಲ್ಲರೂ ಉತ್ಸಾಹದಿಂದ ಸ್ವಯಂಪ್ರೇರಿತರಾಗಿ ತಮ್ಮ ಹತ್ತಿರವಿರುವ ಅಥವಾ ತಮಗೆ ಸಂಬಂಧಿಸಿದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಸ್ಥಳೀಯ ಜನರು ಮತ್ತು ಇತರರೂ ಕೂಡ ಆಸಕ್ತಿಯಿಂದ ಭಾಗವಹಿಸಲು ಮುಂದೆ ಬಂದುದರಿಂದ ಕೊನೆಯ ಕ್ಷಣದವರೆಗೂ ಅತಿಥಿಗಳು, ಕಲಾವಿದರು ಮತ್ತು ಕಾರ್ಯಕ್ರಮಗಳ ಪಟ್ಟಿ ಬೆಳೆಯುತ್ತಲೇ ಹೋಯಿತು. ಎಲ್ಲೆಡೆ ಸ್ಥಳೀಯ ನಾಯಕರು ಪಕ್ಷ-ಜಾತಿ-ಮತ ಬೇಧಗಳನ್ನು ಮರೆತು ಸಹಕರಿಸಿದರು. ಯಾತ್ರೆಯುದ್ದಕ್ಕೂ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಳೀಯ ಸಂಘಟಕರು ಸ್ವತಃ ಏರ್ಪಡಿಸಿದರು ಮತ್ತು ಖರ್ಚನ್ನೂ ಭರಿಸಿದರು, ಹಾಗಾಗಿ ಸ್ವಾಗತ ಸಮಿತಿಯು ಯಾವುದೇ ನಿಧಿಸಂಗ್ರಹಣೆಯ ಪ್ರಯತ್ನಗಳನ್ನು ಮಾಡಬೇಕಾಗಲಿಲ್ಲ ಅಥವಾ ಯಾವುದೇ ಬ್ಯಾಂಕ್ ಖಾತೆಯನ್ನು ಬಳಸಬೇಕಾಗಲಿಲ್ಲ ಅಥವಾ ತೆರೆಯಬೇಕಾಗಲಿಲ್ಲ! ಸಂಗೀತ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಕಲಾವಿದರು ಯಾವುದೇ ಶುಲ್ಕವನ್ನು ವಿಧಿಸದೆ ಸ್ವಯಂಪ್ರೇರಣೆಯಿಂದ ಭಾಗವಹಿಸಿದರು, ಸಲಕರಣೆಗಳ ವೆಚ್ಚವನ್ನು ಒಂದೆರಡು ಹಿತೈಷಿಗಳು ವಹಿಸಿಕೊಂಡರು ಮತ್ತು ಹೆಸರು ಹಾಕುವುದಕ್ಕೆ ನಿರಾಕರಿಸಿದರು. ಅದೇ ರೀತಿ ಯಾತ್ರಿಗಳ ಊಟ ಹಾಗೂ ವಾಸ್ತವ್ಯಕ್ಕೆ ಸ್ಥಳೀಯ ಸಂಘಟಕರಿಂದಲೇ ವ್ಯವಸ್ಥೆ ಮಾಡಲಾಗಿತ್ತು, ಪ್ರತಿ ಕಾರ್ಯಕ್ರಮದಲ್ಲೂ ಸ್ಥಳೀಯ ಸಂಘಟಕರೇ ಉಪಾಹಾರವನ್ನೂ ಒದಗಿಸಿದರು.
ಯಾವುದೇ ಸಂಘಟನೆಯ ಹೆಸರನ್ನಾಗಲೀ, ಸ್ವಾಗತ ಸಮಿತಿಯ ಹೆಸರನ್ನಾಗಲೀ ಕಾರ್ಯಕ್ರಮದ ಮಾಹಿತಿ ಪತ್ರವೂ ಸೇರಿದಂತೆ ಎಲ್ಲಿಯೂ ಉಲ್ಲೇಖಿಸದೆ ಇಡೀ ಯಾತ್ರೆಯನ್ನು ಆಯೋಜಿಸಲಾಯಿತು. ಇದು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯ ಹೆಸರಿಲ್ಲದ ಯಾತ್ರೆಯಾಗಿದ್ದರೂ, ಅನೇಕ ಸಂಸ್ಥೆಗಳು, ಸಂಘಟನೆಗಳು ಮತ್ತು ವ್ಯಕ್ತಿಗಳು ಇದರಲ್ಲಿ ಭಾಗವಹಿಸಿದ್ದರು; ಯಾವುದೇ ನಿಧಿಸಂಗ್ರಹಣೆ ನಡೆಯದಿದ್ದರೂ, ಎಲ್ಲಾ ಕಾರ್ಯಕ್ರಮಗಳಿಗೆ, ಯಾತ್ರಿಗಳ ವಾಸ್ತವ್ಯ ಮತ್ತು ಆಹಾರಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಯಿತು, ಇವೆಲ್ಲವನ್ನೂ ಸ್ಥಳೀಯರೇ ಮಾಡಿದರು! ಒಟ್ಟಿನಲ್ಲಿ, ಭಾಗವಹಿಸಿದ ಪ್ರತಿಯೊಬ್ಬರಿಗೂ ಈ ಯಾತ್ರೆಯು ಅಭೂತಪೂರ್ವವಾದ, ಬಹಳ ಸ್ಮರಣೀಯವಾದ ಅನುಭವವಾಯಿತು.
ದಿನ 1, ಡಿಸೆಂಬರ್ 2, ಶನಿವಾರ
ಬೆಳಗ್ಗೆ 9 ಗಂಟೆ – ಮಂಗಳೂರಿನ ಬಾಬುಗುಡ್ಡೆಯ ಶ್ರೀ ಕುದ್ಮುಲ್ ರಂಗರಾವ್ ಸ್ಮಾರಕದಲ್ಲಿ ಉದ್ಘಾಟನೆ
ದಕ್ಷಿಣ ಕನ್ನಡದಲ್ಲಿ ಢಾಯಿ ಆಖರ್ ಪ್ರೇಮ್ – ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾ ಮಂಗಳೂರಿನ ಬಾಬುಗುಡ್ಡೆಯಲ್ಲಿರುವ ಬ್ರಹ್ಮ ಸಮಾಜದ ಸ್ಮಶಾನದಲ್ಲಿರುವ ಶ್ರೀ ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳದಲ್ಲಿ ಡಿಸೆಂಬರ್ 2, 2023ರ ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಂಡಿತು. ಶ್ರೀ ಕುದ್ಮುಲ್ ರಂಗರಾವ್ (1859-1928) ಅವರು ಅತ್ಯಂತ ನಿರ್ಲಕ್ಷಿತರಾಗಿದ್ದ, ಕಡು ಶೋಷಿತರಾಗಿದ್ದ ಜನವರ್ಗಗಳವರ ವಿಮೋಚನೆಗೆ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟಿದ್ದರು, ದಲಿತೋದ್ಧಾರಕ ಎಂದೇ ಅವರನ್ನು ಕರೆಯಲಾಗುತ್ತಿತ್ತು. ಅತ್ಯಂತ ಹಿಂದುಳಿದ ಮಕ್ಕಳಿಗಾಗಿ ಅನೇಕ ಶಾಲೆಗಳನ್ನು ಮತ್ತು ವಿದ್ಯಾರ್ಥಿನಿಲಯಗಳನ್ನು ತೆರೆದು ಅವರಿಗೆ ಮಧ್ಯಾಹ್ನದ ಊಟವನ್ನು ಒದಗಿಸಿ, ಸುಶಿಕ್ಷಿತರಾಗುವಂತೆ ಅಹರ್ನಿಶಿ ದುಡಿದಿದ್ದ ಕುದ್ಮುಲ್ ರಂಗರಾಯರು, ವಿಧವಾ ವಿವಾಹಗಳನ್ನು ನಡೆಸುವ ಮೂಲಕ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಸುಧಾರಣೆಗಳ ಆದ್ಯ ಪ್ರವರ್ತರಾಗಿದ್ದರು. ಸಮಾಜದ ಕಟ್ಟಕಡೆಯಲ್ಲಿದ್ದ ತೀರಾ ಅಸ್ಪೃಶ್ಯರ ವಿಮೋಚನೆಗೆ ಕುದ್ಮುಲ್ ರಂಗರಾಯರು ತನಗೆ ಪ್ರೇರಣೆಯಾಗಿದ್ದವರು ಎಂದು ಸ್ವತಃ ಮಹಾತ್ಮ ಗಾಂಧೀಜಿಯವರೇ ಗುರುತಿಸಿದ್ದರು.
ಸಾರಿಗೆ ಕಚೇರಿಯ ನಿವೃತ್ತ ಅಧಿಕಾರಿ ಹಾಗೂ ಕವಿ, ವಿದ್ವಾಂಸ ಡಾ.ಮುಗಳವಳ್ಳಿ ಕೇಶವ ಧರಣಿಯವರ ನೇತೃತ್ವದಲ್ಲಿ ಈ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘನತೆಯಿಂದ ಕೂಡಿದ ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿತ್ತು ಮತ್ತು ಉಪಾಹಾರವನ್ನು ನೀಡಲಾಯಿತು.
ರಂಗಭೂಮಿ ಕಾರ್ಯಕರ್ತರಾದ ಪ್ರಭಾಕರ ಕಾಪಿಕಾಡ್ ಮತ್ತು ಶ್ಯಾಮಸುಂದರ್ ರಾವ್ ಮತ್ತು ಇಪ್ಟಾದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಷಣ್ಮುಖಸ್ವಾಮಿ ಅವರು ಢಾಯಿ ಆಖರ್ ಪ್ರೇಮ್ ವಾಚಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಧಾ ಟೀಚರ್ ಬರೆದ ಶ್ರೀ ಕುದ್ಮುಲ್ ರಂಗರಾವ್ ಅವರ ಕುರಿತಾದ ಭಜನೆಯನ್ನು ಮಂಗಳೂರಿನ ಕಾಪಿಕಾಡ್ ನಲ್ಲಿರುವ ಕುದ್ಮುಲ್ ರಂಗರಾವ್ ಸ್ಮಾರಕ ಸಮಿತಿಯ ದೇವೇಂದ್ರ ಮತ್ತು ಕಿರಣ್ ಅವರು ಹಾಡಿದರು. ಶ್ರೀ ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ಇಪ್ಟಾ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಸನ್ನ ಹೆಗ್ಗೋಡು ಅವರ ನೇತೃತ್ವದಲ್ಲಿ ಎಲ್ಲಾ ಯಾತ್ರಿಗಳು ಪುಷ್ಪನಮನ ಸಲ್ಲಿಸುವ ಮೂಲಕ ಯಾತ್ರೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.
ಯಾತ್ರೆಯಲ್ಲಿ ಭಾಗವಹಿಸುವವರನ್ನು ಸ್ವಾಗತಿಸಿದ ಡಾ.ಕೇಶವ ಧರಣಿಯವರು ಕುದ್ಮುಲ್ ರಂಗರಾವ್ ಅವರ ಸ್ಮಾರಕವನ್ನು ಯಾತ್ರೆಯ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಅತ್ಯಂತ ಪ್ರಶಸ್ತವೆಂದು ಶ್ಲಾಘಿಸಿದರು. ಕುದ್ಮುಲ್ ರಂಗರಾಯರು ಸ್ಥಾಪಿಸಿದ್ದ ಶೋಷಿತ ವರ್ಗಗಳ ಅಭಿಯಾನದ ಬಾವುಟದಲ್ಲಿ ಮನೆಯೊಂದರ ಮುಂದೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳವರು ಒಗ್ಗಟ್ಟಿನಿಂದ ಕೈ ಹಿಡಿದು ನಿಂತಿರುವ ಲಾಂಛನವಿತ್ತು, ಈ ಭಾವೈಕ್ಯ ಯಾತ್ರೆಯ ಉದ್ಘಾಟನೆ ಅಂಥವರ ನೆನಪಿನಿಂದಲೇ ಹೊರಡುತ್ತಿರುರುವುದು ಅತ್ಯಂತ ಸೂಕ್ತ ಎಂದು ಅವರು ನೆನಪಿಸಿದರು. ‘ನನ್ನ ಶಾಲೆಯಲ್ಲಿ ಓದುವ ದಲಿತ ಹುಡುಗ ಸಾರ್ವಜನಿಕ ಸೇವೆಗೆ ಸೇರಬೇಕು ಮತ್ತು ಅವನ ಕಾರು ನಮ್ಮ ಹಳ್ಳಿಯ ರಸ್ತೆಗಳಲ್ಲಿ ತಿರುಗಬೇಕು, ಆಗ ಏಳುವ ಧೂಳು ನನ್ನ ತಲೆಗೆ ತಾಗಿದಾಗ ನನ್ನ ಜನ್ಮ ಸಾರ್ಥಕವೆಂದು ಪರಿಗಣಿಸುತ್ತೇನೆ’ ಎಂದು ಕುದ್ಮುಲ್ ರಂಗರಾಯರ ಸಮಾಧಿಯಲ್ಲಿ ಕೆತ್ತಲಾಗಿರುವ ಹೇಳಿಕೆಯನ್ನು ರಾಯರು 1911 ರಲ್ಲಿ ಮಾಡಿದ್ದರು, ಶ್ರೀ ರಾವ್ ಅಂತಹ ಕನಸಿನ ಬಗ್ಗೆ ಮಾತನಾಡುವಾಗ, ಇಡೀ ಭಾರತದಲ್ಲಿ ಕೇವಲ 3 ಕಾರುಗಳು ಇದ್ದವು, ಹಾಗಿದ್ದಲ್ಲಿ ದಲಿತನೋರ್ವ ಕಾರಿನಲ್ಲಿ ಓಡಬೇಕೆನ್ನುವ ಆಶಯವನ್ನು ಅವರು ಹೊಂದಿದ್ದರೆನ್ನುವುದು ಅವರ ವ್ಯಕ್ತಿತ್ವದ ಅಗಾಧತೆಯನ್ನು ಪರಿಚಯಿಸುತ್ತದೆ ಎಂದು ಡಾ. ಧರಣಿ ಹೇಳಿದರು. ಇಪ್ಟಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಸನ್ನ ಅವರು ಶ್ರೀ ಕುದ್ಮುಲ್ ರಂಗರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಅವರ ಸಮಾಧಿಯಿರುವ ಸ್ಥಳದ ನಿರಾಳತೆ, ನೈಸರ್ಗಿಕ ಪರಿಸರ ಮತ್ತು ಶಾಂತಿಯನ್ನು ಕಾಪಾಡುವಂತೆ ವಿನಂತಿಸಿದರು. ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ವೇಣುಗೋಪಾಲ ಶೆಟ್ಟಿ ಮಾತನಾಡಿ, ಶ್ರೀ ಕುದ್ಮುಲ್ ರಂಗರಾವ್ ಅವರು ದೀನದಲಿತರು ಮತ್ತು ಅಸ್ಪೃಶ್ಯರಲ್ಲೂ ಕೊನೆಯವರಿಗೆ ಸಹಾಯ ಮಾಡುವ ಬದ್ಧತೆಯಲ್ಲಿ ಮಾಡಿದ ಅಪಾರ ತ್ಯಾಗಗಳ ಬಗ್ಗೆ ಮಾತನಾಡಿದರು ಮತ್ತು ಅವರು ಮಹಾತ್ಮಾ ಗಾಂಧಿ, ರಾಜಾಜಿ ಮತ್ತು ಇತರ ರಾಷ್ಟ್ರ ನಾಯಕರನ್ನು ಅಸ್ಪೃಶ್ಯರು ಮತ್ತು ದಲಿತರ ವಿಮೋಚನೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲು ಹೇಗೆ ಪ್ರೇರೇಪಿಸಿದರು ಎಂಬುದನ್ನು ವಿವರಿಸಿದರು.
ಬೆಳಗ್ಗೆ 10 ಗಂಟೆ – ಬಾಸೆಲ್ ಮಿಷನ್ ಆವರಣ, ಬಲ್ಮಠ:
ಯಾತ್ರೆಯ ಮುಂದಿನ ಗುರಿ ಮಂಗಳೂರಿನ ಬಲ್ಮಠದಲ್ಲಿರುವ ಬಾಸೆಲ್ ಮಿಷನ್ ಆವರಣವಾಗಿತ್ತು. ಯಾತ್ರೆಯು ತಲುಪಿದಾಗ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಡಾ.ಎಚ್.ಎಂ.ವ್ಯಾಟ್ಸನ್, ಇತರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿದರು. ಡಾ. ವ್ಯಾಟ್ಸನ್ ಪ್ರಾಸ್ತಾವಿಕ ಮಾತುಗಳನ್ನಾಡಿದ ಬಳಿಕ, ಶ್ರೀ ಪ್ರಸನ್ನ, ಡಾ ಸಿದ್ದನಗೌಡ ಪಾಟೀಲ್ ಮತ್ತು ಡಾ ಸಬಿಹಾ ಭೂಮಿಗೌಡ ನೇತೃತ್ವದ ಯಾತ್ರಿಗಳು ರೆ. ಫರ್ಡಿನಾಡ್ ಕಿಟೆಲ್ (1832-1903) ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಶ್ರೀ ಪ್ರಸನ್ನ ಅವರು ರೆ. ಕಿಟೆಲ್ ಅವರ ಅಪಾರ ಕೊಡುಗೆಗಳ ಕುರಿತು ಮಾತನಾಡಿದರು; ಬಾಸೆಲ್ ಮಿಷನ್‌ನ ಧರ್ಮಪ್ರಚಾರಕರಾಗಿ ಕುದುರೆಯ ಮೇಲೆ ಸವಾರಿ ಮಾಡುತ್ತಾ, ರಾಜ್ಯಾದ್ಯಂತ ಅವರು ಮಾರುಕಟ್ಟೆಗಳಲ್ಲಿ ಜನರ ಸಂಭಾಷಣೆಗಳನ್ನು ಶ್ರದ್ಧೆಯಿಂದ ಆಲಿಸುತ್ತಾ ಸಾವಿರಾರು ಕನ್ನಡ ಪದಗಳನ್ನು ಸಂಗ್ರಹಿಸಿ 1894 ರಲ್ಲಿ 70000 ಪದಗಳ ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ಪ್ರಕಟಿಸಿದರು, ಅದು ಇಂದಿಗೂ ಅತ್ಯುತ್ತಮ ಮಾನದಂಡವಾಗಿ ಉಳಿದಿದೆ ಎಂದು ಪ್ರಸನ್ನ ಅವರು ಹೇಳಿದರು. ಹೊಸತು ಮಾಸಪತ್ರಿಕೆಯ ಸಂಪಾದಕ, ಕನ್ನಡ ವಿದ್ವಾಂಸ, ಬರಹಗಾರ ಮತ್ತು ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ್ ಅವರು ರೆ. ಕಿಟ್ಟೆಲ್ ಅವರ ಅಪಾರ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಕನ್ನಡ ವ್ಯಾಕರಣದ ಅತ್ಯಂತ ಕಠಿಣ ಪುಸ್ತಕವಾದ ನಾಗಾರ್ಜುನನ ಶಬ್ದ ಮಣಿ ದರ್ಪಣವನ್ನು ಆ ಕಾಲದಲ್ಲಿ ಆಂಗ್ಲ ಭಾಷೆಗೆ ಅನುವಾದಿಸಿದ ಅವರ ಅಸಾಧಾರಣ ಕೆಲಸವನ್ನು ಶ್ಲಾಘಿಸಿದರು.
ಬಳಿಕ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ವಿದ್ಯಾರ್ಥಿಗಳು ರೆ. ಕಿಟೆಲ್ ಅವರಿಗೆ ಹಾಡಿನ ಮೂಲಕ ವಂದಿಸಿದರು.
ನಂತರ, ಡಾ.ಸಬಿಹಾ ಭೂಮಿಗೌಡ, ಪ್ರಸನ್ನ ಮತ್ತು ಡಾ.ಸಿದ್ದನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಯಾತ್ರಿಗಳು ರೆ. ಹರ್ಮನ್ ಮೊಗ್ಲಿಂಗ್ (1811-1881) ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ರೆ. ಹರ್ಮನ್ ಮೊಗ್ಲಿಂಗ್ ಅವರು 1843 ರಲ್ಲಿ ಕನ್ನಡ ಭಾಷೆಯ ಮೊದಲ ಪತ್ರಿಕೆಯಾದ ಮಂಗಳೂರು ಸಮಾಚಾರದ ಪ್ರಕಾಶಕರಾಗಿದ್ದರು. ಬಾಸೆಲ್ ಮಿಷನ್ ಪ್ರೆಸ್, ಮಂಗಳೂರು ಸಮಾಚಾರ, ಕಿಟೆಲ್ ನಿಘಂಟು ಮತ್ತು ಮುದ್ರಣಾಲಯದಲ್ಲಿ ಬಳಸಲಾದ ಇತರ ವಸ್ತುಗಳನ್ನು ಯಾತ್ರಿಗಳ ವೀಕ್ಷಣೆಗಾಗಿ ಪ್ರದರ್ಶಿಸಲಾಗಿತ್ತು. ಕಾಲೇಜಿನ ವತಿಯಿಂದ ಯಾತ್ರಿಗಳಿಗೆ ಉಪಾಹಾರವನ್ನೂ ಏರ್ಪಡಿಸಲಾಗಿತ್ತು.
ಬೆಳಗ್ಗೆ 9.30 ರಿಂದ – ಮಹಿಳಾ ಸಭಾ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ, ಬಲ್ಮಠ
ಮಂಗಳೂರಿನ ಮಹಿಳಾ ಸಭಾವನ್ನು 1911 ರಲ್ಲಿ ದೇಶಭಕ್ತ ಕಾರ್ನಾಡ್ ಸದಾಶಿವ ರಾವ್, ಅವರ ಪತ್ನಿ ಶಾಂತಾ ಬಾಯಿ, ಕಮಲಾದೇವಿ ಚಟ್ಟೋಪಾಧ್ಯಾಯ ಅವರ ತಾಯಿ ಗಿರಿಜಾ ಬಾಯಿ ಮತ್ತು ಇತರರು ಮಹಿಳೆಯರ, ಅದರಲ್ಲೂ ವಿಶೇಷವಾಗಿ ಬಾಲವಿಧವೆಯರ ನೆರವಿಗಾಗಿ ಸ್ಥಾಪಿಸಿದ್ದರು. ಆಗಿನ ಬ್ರಿಟಿಷ್ ಸರ್ಕಾರವು ಮಹಿಳಾ ಸಭಾಗೆ 1.2 ಎಕರೆ ಭೂಮಿಯನ್ನು ದಾನ ಮಾಡಿತ್ತು. ಅಲ್ಲಿರುವ ಮಹಿಳಾ ಸಭಾದ ಕಟ್ಟಡಗಳು ಈ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸುಧಾರಕರ ಮಹಾನ್ ಕಾರ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ, ಅವನ್ನು ರಾಷ್ಟ್ರೀಯ ಸ್ಮಾರಕಗಳಾಗಿ ರಕ್ಷಿಸಬೇಕಾಗಿದೆ. ಆದರೆ, ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಈ ಕಟ್ಟಡಗಳು ಮತ್ತು ಭೂಮಿ ನೆಲಸಮವಾಗಿ ಅಳೋದು ಹೋಗುವ ಭೀತಿಯಲ್ಲಿವೆ.
ಢಾಯಿ ಆಖರ್ ಪ್ರೇಮ್ ಯಾತ್ರೆಯು ಈ ಸ್ಥಳದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿಗ್ಗಜರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಆರ್ಟ್ ಕೆನರಾ ಟ್ರಸ್ಟ್‌ನ ಅಧ್ಯಕ್ಷರೂ, ಇಂಟಾಚ್ ಮಂಗಳೂರು ವಿಭಾಗದ ಸಂಚಾಲಕರೂ ಆಗಿರುವ
ಸುಭಾಶ್ಚಂದ್ರ ಬಸು ಅವರ ನೇತೃತ್ವದಲ್ಲಿ, ರಾಜೇಂದ್ರ ಕೇದಿಗೆ ಮತ್ತು ನೇಮಿರಾಜ್ ಶೆಟ್ಟಿ ಮಾರ್ಗದರ್ಶನದಲ್ಲಿ ಆರ್ಟ್ ಕೆನರಾ ಟ್ರಸ್ಟ್ ಮತ್ತು ಮಂಗಳೂರಿನ ಇಂಟಾಚ್ ಘಟಕದ ಸದಸ್ಯರು ಮಹಿಳಾ ಸಭಾಭವನದಲ್ಲಿ ಪಾರಂಪರಿಕ ಸ್ಥಳಗಳ ಸಂರಕ್ಷಣೆಯ ಬಗ್ಗೆ ಕಲಾ ಕಾರ್ಯಾಗಾರವನ್ನು 9.30ರಿಂದ ಆರಂಭಿಸಿದರು. ಕಲಾವಿದರಾದ ವಿಲ್ಸನ್ ಸೋಜಾ, ಸಂತೋಷ ಅಂದ್ರಾದೆ, ಸುಜಿತ್ ಕೆ ವಿ ಮತ್ತು ವಿವೇಕ್ ಎ ಆರ್ ಇದರಲ್ಲಿ ಭಾಗವಹಿಸಿದ್ದರು.
ಬಳಿಕ 10.30ರ ಹೊತ್ತಿಗೆ ಯಾತ್ರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮಹಿಳಾ ಸಭಾದ ಅಧ್ಯಕ್ಷೆ ವಿಜಯಲಕ್ಷ್ಮಿ ರೈ ಅವರ ನೇತೃತ್ವದಲ್ಲಿ ಮಹಿಳಾ ಸಭಾ ಮತ್ತು ಆಕ್ಟ್ ಹಾಗೂ ಇಂಟಾಚ್ ಸದಸ್ಯರು ಎಲ್ಲರೂ ಅವರನ್ನು ಸ್ವಾಗತಿಸಿದರು. ವಿಜಯಲಕ್ಷ್ಮಿ ರೈ ಅವರು ಮಹಿಳಾ ಸಭಾ ಸ್ಥಾಪನೆಯ ಆದರ್ಶಗಳನ್ನು ವಿವರಿಸಿದರು ಮತ್ತು ಅದರ ಸಂಸ್ಥಾಪಕರಿಗೂ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಪಾತ್ರವನ್ನು ನಿರ್ವಹಿಸಿದ, ಆ ನಂತರ ಭಾರತೀಯ ಕರಕುಶಲ ಮತ್ತು ಕೈಮಗ್ಗ ಮತ್ತು ಎಲ್ಲಾ ಕಲೆಗಳ ಪುನರುಜ್ಜೀವನ ಮತ್ತು ಬಲವರ್ಧನೆಗೆ ಅವಿರತವಾಗಿ ಶ್ರಮಿಸಿದ ಮಂಗಳೂರಿನ ಪುತ್ರಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ ಗೌರವ ಸಲ್ಲಿಸಿದರು. ಶ್ರೀ ಪ್ರಸನ್ನ ಅವರು ಈ ಮಹಾನ್ ವ್ಯಕ್ತಿಗಳ ತ್ಯಾಗವನ್ನು ಸ್ಮರಿಸಿ, ಅವರು ನಿರ್ಮಿಸಿದ ಸಂಸ್ಥೆಗಳನ್ನು ಉಳಿಸಿ ಬಲಪಡಿಸಲು ಕರೆ ನೀಡಿದರು.
ಬೆಳಗ್ಗೆ 10.30 – ಟಾಗೋರ್ ಪಾರ್ಕ್, ಬಾವುಟ ಗುಡ್ಡೆ
ಲೈಟ್ ಹೌಸ್ ಬೆಟ್ಟದ (ಬಾವುಟ ಗುಡ್ಡೆ) ಮೇಲೆ, ಮಂಗಳೂರಿನ ಶಿರೋಭಾಗದಲ್ಲಿರುವ ಈ ಹೆಗ್ಗುರುತು ಮೈಸೂರಿನ ಸುಲ್ತಾನ ಹೈದರ್ ಅಲಿ (1761-1782) ನಿರ್ಮಿಸಿ, ಮಗ ಟಿಪ್ಪು ಸುಲ್ತಾನ ಪೋಷಿಸಿ, ಬ್ರಿಟಿಷರು ಅಸಿಟಿಲೀನ್ ದೀಪದಿಂದ ಬೆಳಗಿಸಿ, ಗುರುದೇವ ಟಾಗೋರ್ ಭೇಟಿ ನೀಡಿ ಆ ಹೆಸರನ್ನು ಪಡೆದ ಐತಿಹಾಸಿಕ ತಾಣವಾಗಿದ್ದು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದೆ, ಮಂಗಳೂರಿನಲ್ಲಿ ನಡೆದಿರುವ ವಿವಿಧ ಹೋರಾಟಗಳು ಮತ್ತು ಕಾರ್ಮಿಕರ ಮೆರವಣಿಗೆಗಳು ಹೊರಡುವ ಸ್ಥಳವೂ ಆಗಿದೆ. ಇದು ಈಗ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಕಚೇರಿಯಿರುವ ಕಟ್ಟಡವನ್ನು ಕೂಡ ಹೊಂದಿದೆ.
ಢಾಯಿ ಆಖರ್ ಪ್ರೇಮ್ ಯಾತ್ರೆಗಾಗಿ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಇಸ್ಮಾಯಿಲ್ ಎನ್ ಮತ್ತು ಇತರ ಪದಾಧಿಕಾರಿಗಳು ಮತ್ತು ಸದಸ್ಯರು, ದಕ್ಷಿಣ ಕನ್ನಡದ ಗಾಂಧಿ ವಿಚಾರ ವೇದಿಕೆಯ ಸಹಯೋಗದಲ್ಲಿ ಇಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ನಾಡ್ ಸದಾಶಿವ ರಾವ್ ಅವರ ಕುರಿತಾದ ಕಬೀರನಾದ ಕುಬೇರ ಕೃತಿಯ ಲೇಖಕ ಹಾಗೂ ಶಿಕ್ಷಕ ಮತ್ತು ಚಿಂತಕ ಅರವಿಂದ ಚೊಕ್ಕಾಡಿ ಅವರು ಕಾರ್ನಾಡ್ ಸದಾಶಿವ ರಾವ್ ಅವರಿಗೆ ನುಡಿನಮನ ಸಲ್ಲಿಸಿದರು. ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ಮಂಗಳೂರಿನ ಅರ್ಧಭಾಗವನ್ನು ಖರೀದಿಸಬಹುದಾಗಿದ್ದ ಅತ್ಯಂತ ಶ್ರೀಮಂತ ವಕೀಲರಾಗಿದ್ದ ಕೆ.ಎಸ್.ರಾವ್ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಮ್ಮ ದೇಶಕ್ಕಾಗಿ ಮತ್ತು ಜನರಿಗಾಗಿ ತಮ್ಮ ಸರ್ವಸ್ವವನ್ನು ಹೇಗೆ ನೀಡಿದರು ಮತ್ತು ಕೊನೆಗೆ ಚಿಕಿತ್ಸೆಗೂ ಹಣವಿಲ್ಲದೆ ನಿರ್ಗತಿಕರಾಗಿ ಮರಣಹೊಂದಿದರು ಎಂಬುದನ್ನು ಅರವಿಂದ ಚೊಕ್ಕಾಡಿ ನೆನಪಿಸಿದರು. ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಭಾರತವನ್ನು ಮುಕ್ತಗೊಳಿಸಲು ತಮ್ಮ ಸತ್ಯಾಗ್ರಹವನ್ನು ಮುಂದುವರೆಸುವಂತೆ ಒತ್ತಾಯಿಸಿದ ಸದಾಶಿವ ರಾಯರು ಕಾಂಗ್ರೆಸ್ ಪಕ್ಷವನ್ನು ದಕ್ಷಿಣ ಕನ್ನಡಕ್ಕೆ ತಂದು ಸತ್ಯಾಗ್ರಹಕ್ಕೆ ಸಹಿ ಹಾಕಿದ ಮೊದಲ ವ್ಯಕ್ತಿಯಾಗಿದ್ದರು ಎಂದು ಅವರು ನೆನಪಿಸಿದರು. ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮಾಜಿ ಎಂಎಲ್‌ಸಿ ಅಣ್ಣಾ ವಿನಯಚಂದ್ರ, ಪ್ರಸನ್ನ, ಪ್ರೊ.ಸಬಿಹಾ ಭೂಮಿಗೌಡ, ಪ್ರೊ.ಶಿವರಾಮ ಶೆಟ್ಟಿ, ಪ್ರೊ. ಕ್ಸೇವಿಯರ್ ಡಿಸೋಜ, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಶೆಟ್ಟಿ, ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಾತ್ಮಾ ಗಾಂಧೀಜಿ ಹಾಗೂ ಕೆ ಸದಾಶಿವ ರಾವ್ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಬೆಳಗ್ಗೆ 11.30ಕ್ಕೆ ಟೆಂಪಲ್ ಸ್ಕ್ವೇರ್, ಕಾರ್ ಸ್ಟ್ರೀಟ್
ಢಾಯಿ ಆಖರ್ ಪ್ರೇಮ್ – ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾ ನಂತರ ಕಾರ್ ಸ್ಟ್ರೀಟ್‌ನಲ್ಲಿರುವ ದೇವಸ್ಥಾನದ ಚೌಕಕ್ಕೆ ತೆರಳಿತು. ಅಲ್ಲಿ ಕೊಂಕಣಿ ಭಾಷಿಕ ಸಾರಸ್ವತರ ಆರಾಧ್ಯ ದೇವರ ಶ್ರೀ ವೆಂಕಟರಮಣ ದೇವಸ್ಥಾನವು ನೆಲೆಸಿದ್ದು, ಪ್ರತಿ ವರ್ಷ ಸಾಂಪ್ರದಾಯಿಕ ರಥೋತ್ಸವವನ್ನು ಅಲ್ಲಿ ಆಚರಿಸಲಾಗುತ್ತದೆ. ಕೊಂಕಣಿ ಮಾತನಾಡುವ ಸಾರಸ್ವತರು ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಗಮನಾರ್ಹ ಸಂಖ್ಯೆಯಲ್ಲಿದ್ದು, ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದ ಸಮಯದಲ್ಲಿ ಅಪಾರ ಕೊಡುಗೆ ನೀಡಿದವರಾಗಿದ್ದಾರೆ. ಟೆಂಪಲ್ ಸ್ಕ್ವೇರ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಫೆಡರೇಶನ್ ಆಫ್ ಇಂಡಿಯನ್ ರಾಷನಲಿಸ್ಟ್ ಅಸೋಸಿಯೇಷನ್ಸ್ (FIRA) ರಾಷ್ಟ್ರೀಯ ಅಧ್ಯಕ್ಷ ಮತ್ತು ಖ್ಯಾತ ಚಿಂತಕ ಮತ್ತು ಹೋರಾಟಗಾರ ಪ್ರೊ.ನರೇಂದ್ರ ನಾಯಕ್ ಅವರು ಪರಿಕಲ್ಪಿಸಿ ಆಯೋಜಿಸಿದ್ದರು.
ಯಾತ್ರೆಯನ್ನು ಸ್ವಾಗತಿಸಿದ ನಂತರ ಪ್ರೊ.ನರೇಂದ್ರ ನಾಯಕ್ ಅವರು ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯ ಅಗತ್ಯವನ್ನು ಒತ್ತಿ ಹೇಳಿದರು. ಕುದ್ಮುಲ್ ರಂಗರಾವ್, ರಾಧಾಬಾಯಿ ಕುದ್ಮುಲ್, ಕಾರ್ನಾಡ್ ಸದಾಶಿವ ರಾವ್, ಉಮಾಬಾಯಿ ಕುಂದಾಪುರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ, ಮತ್ತು ಸ್ವಾತಂತ್ರ್ಯ ಹೋರಾಟಗಾರ, ಸುಪ್ರಸಿದ್ಧ ಟ್ರೇಡ್ ಯೂನಿಯನ್ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮುಂಬೈನಲ್ಲಿ ಪಿ.ಸಿ.ಜೋಶಿ ನೇತೃತ್ವದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಭೂಗತ ಜಾಲದ ಪ್ರಮುಖ ಕಾರ್ಯಕರ್ತನಾಗಿ ಕೆಲಸ ಮಾಡಿದ ಈ ಶಾಂತಾರಾಂ ಪೈ, ಸಂಸತ್ತಿನಲ್ಲಿ ದಕ್ಷಿಣ ಕನ್ನಡದಿಂದ ಮೊದಲ ಪ್ರತಿನಿಧಿಯಾಗಿದ್ದು, ಆಧುನಿಕ ಮಂಗಳೂರಿನ ನಿರ್ಮಾತೃ ಎಂದು ಪರಿಗಣಿತರಾಗಿರುವ ಉಳ್ಳಾಲ ಶ್ರೀನಿವಾಸ ಮಲ್ಯ, ಮತ್ತು ಕೆನರಾ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬಾ ರಾವ್ ಪೈ ಅವರ ಭಾವಚಿತ್ರಗಳ ಭಿತ್ತಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು.
ಈ ಎಲ್ಲಾ ಹಿರಿಯರು ನಮ್ಮ ದೇಶಕ್ಕೂ, ಮಂಗಳೂರಿಗೂ ನೀಡಿದ ಅಪ್ರತಿಮ ಕೊಡುಗೆಗಳಿಗಾಗಿ ಸಂಘಟಕರು ಮತ್ತು ಯಾತ್ರೆಯ ಪರವಾಗಿ ಮಂಜುಳಾ ನಾಯಕ್ ಅವರು ಶ್ರದ್ಧಾಂಜಲಿ ಅರ್ಪಿಸಿದರು. ಯಾತ್ರೆಯಲ್ಲಿದ್ದ 125 ಕ್ಕೂ ಹೆಚ್ಚು ಪ್ರತಿನಿಧಿಗಳಿಗೆ ಮುಗ ಉಸ್ಲಿ (ಬೇಯಿಸಿದ ಹೆಸರು ಕಾಳು, ತಾಜಾ ತೆಂಗಿನಕಾಯಿ, ಮೆಣಸಿನಕಾಯಿ ಮಸಾಲೆಯ ಭಕ್ಷ್ಯ), ಚನೆ ಉಪ್ಕರಿ (ಕಪ್ಪು ಕಡಲೆ, ತುರಿದ ತೆಂಗಿನಕಾಯಿ, ಮೆಣಸಿನಕಾಯಿ ಮತ್ತು ಮಸಾಲೆಗಳು), ಫೋವಾ ಚಟ್ನಿ (ಅವಲಕ್ಕಿ, ತುರಿದ ತೆಂಗಿನಕಾಯಿ, ಮಸಾಲೆ), ಕನಂಗ ಚಿಪ್ಸ್ (ಸಿಹಿ ಆಲೂಗಡ್ಡೆ ಚಿಪ್ಸ್) ಮತ್ತು ಪಾನಕ (ಮಸಾಲೆಯುಕ್ತ ಪಾನೀಯ)ಗಳಂತಹ ಕೊಂಕಣಿ ಭಾಷಿಕರ ಸಾಂಪ್ರದಾಯಿಕ ರುಚಿಕರವಾದ ಖಾದ್ಯಗಳ ಸತ್ಕಾರ ನೀಡಲಾಯಿತು.
2pm – ಮಂಗಳೂರು ಧಕ್ಕೆ – ಹಳೆಯ ಬಂದರಿನ ಮೀನು ಮಾರುಕಟ್ಟೆ
ಮಧ್ಯಾಹ್ನದ ವೇಳೆಗೆ ಹಳೇ ಬಂದರಿನಲ್ಲಿ ಮೀನು ಮಾರುಕಟ್ಟೆಯಿರುವ ಧಕ್ಕೆಗೆ ಯಾತ್ರೆ ತಲುಪಿತು. ಮಂಗಳೂರಿನ ಧಕ್ಕೆ ಮತ್ತು ಬಂದರು ಪ್ರದೇಶವು ಬಹಳ ಹಿಂದಿನಿಂದಲೂ ಭಾಷೆಗಳು, ಸಮುದಾಯಗಳು, ಸಂಸ್ಕೃತಿಗಳು ಮತ್ತು ದುಡಿಯುವ ಜನರ ಸಾಮರಸ್ಯದ, ಸಹಬಾಳ್ವೆಯ ಸಂಕೇತವಾಗಿದೆ. ಕರ್ನಾಟಕ ಇಪ್ಟಾದ ಡಾ ಸಿದ್ದನಗೌಡ ಪಾಟೀಲ್, ಸಾಥಿ ಸುಂದರೇಶ್, ಅಮ್ಜದ್, ಷಣ್ಮುಖಸ್ವಾಮಿ, ಕರ್ನಾಟಕ ಎನ್‌ಎಫ್‌ಐಡಬ್ಲ್ಯು ಕಾರ್ಯದರ್ಶಿ ಭಾರತಿ ಪ್ರಶಾಂತ್, ದಕ್ಷಿಣ ಕನ್ನಡ ಇಪ್ಟಾದ ಸುರೇಶ್ ಕುಮಾರ್ ಬಂಟ್ವಾಳ್, ಕರುಣಾಕರ್ ಮಾರಿಪಳ್ಳ, ಸೀತಾರಾಮ್ ಬೇರಿಂಜ, ತಿಮ್ಮಪ್ಪ ಮುಂತಾದವರ ನೇತೃತ್ವದಲ್ಲಿ ಢಾಯಿ ಆಖರ್ ಪ್ರೇಮ್ ಯಾತ್ರೆಯ ಭಾಗಿಗಳು ಮೀನುಗಾರರು ಮತ್ತು ಮಹಿಳೆಯರೊಂದಿಗೆ ಸಂವಾದ ನಡೆಸಿದರು ಮತ್ತು ಸಾಮರಸ್ಯ, ಪ್ರೀತಿ ಮತ್ತು ಸಹಬಾಳ್ವೆಯ ಹಾಡುಗಳನ್ನು ಹಾಡಿದರು.
ಸಂಜೆ 4.30 – ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಕುದ್ರೋಳಿ:
ನಂತರ ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಯಾತ್ರೆ ತೆರಳಿತು. ಈ ದೇವಳವನ್ನು 1912 ರಲ್ಲಿ ನಿರ್ಮಿಸಲಾಯಿತು ಮತ್ತು ಗುರು, ಸಂತ, ಸುಧಾರಕ ಮತ್ತು ಕವಿ ಶ್ರೀ ನಾರಾಯಣ ಗುರುಗಳು ಸ್ವತಃ ಇಲ್ಲಿನ ಪ್ರತಿಷ್ಠಾಪನೆಯನ್ನು ನಡೆಸಿದ್ದರು. ಇದು ಪ್ರದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದ್ದು, ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ನಿಜಾರ್ಥದಲ್ಲಿ ಆಚರಣೆಗೆ ತರಲಾಗಿದೆ, ಮಹಿಳೆಯರು ಮತ್ತು ವಿಧವೆಯರು ಸಹ ಇಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಾರೆ, ಎಲ್ಲಾ ಸಮುದಾಯಗಳು, ಧರ್ಮಗಳು ಮತ್ತು ವಿಭಾಗಗಳ ಜನರು ಇಲ್ಲಿ, ವಿಶೇಷವಾಗಿ ಪ್ರತಿ ವರ್ಷ ದೇವಸ್ಥಾನವು ಆಯೋಜಿಸುವ ಪ್ರಸಿದ್ಧ ಮಂಗಳೂರು ದಸರಾದಲ್ಲಿ, ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಾರೆ.
ಢಾಯಿ ಆಖರ್ ಪ್ರೇಮ್ – ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾದ ಅಂಗವಾಗಿ, ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಕರ್ನಾಟಕದ ಪ್ರಸಿದ್ಧ ಗಾಯಕ ಇಮ್ತಿಯಾಜ್ ಸುಲ್ತಾನ್ ಅವರ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಹಿತೈಷಿ ದಾನಿಗಳ ಸಹಾಯದಿಂದ ಏರ್ಪಡಿಸಲಾಗಿತ್ತು. ಇಮ್ತಿಯಾಜ್ ಸುಲ್ತಾನರ ಭಕ್ತಿ ಸಂಗೀತವು ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು ಮತ್ತು ಇಪ್ಟಾದ ರಾಷ್ಟ್ರೀಯ ಅಧ್ಯಕ್ಷರಾದ ಪ್ರಸನ್ನ ಅವರು ಸಂಪೂರ್ಣ ಧ್ಯಾನಸ್ಥರಾಗುವಂತೆ ಮಾಡಿತು. ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಲ್ಲೊಬ್ಬರಾದ ಪದ್ಮರಾಜ್ ಅವರು ಯಾತ್ರಿಗಳನ್ನೂ, ಕಲಾವಿದರನ್ನೂ ಸ್ವಾಗತಿಸಿ, ನಂತರ ಕಲಾವಿದರನ್ನು ಸನ್ಮಾನಿಸಿದರು. ಈ ಕಾರ್ಯಕ್ರಮವನ್ನು ಆಯೋಜಿಸಲು ಇಪ್ಟಾದ ಪ್ರೇಮನಾಥ್ ಮತ್ತು ಜಗತ್ ಪಾಲ್ ಸಹಕರಿಸಿದ್ದರು.
ಸಂಜೆ 5.30 – ಸುಲ್ತಾನ್ ಬತ್ತೇರಿ
ಸಂಜೆ ವೇಳೆಗೆ ಯಾತ್ರೆಯು ಸುಲ್ತಾನ್ ಬತ್ತೇರಿ ತಲುಪಿತು. ಟಿಪ್ಪು ಸುಲ್ತಾನ್ 1784 ರಲ್ಲಿ ನಿರ್ಮಿಸಿದ ಈ ವೀಕ್ಷಣಾ ಗೋಪುರವು ನೇತ್ರಾವತಿ ಮತ್ತು ಗುರುಪುರ ನದಿಗಳು ಅರಬ್ಬಿ ಸಮುದ್ರವನ್ನು ಸೇರುವ ಸಂಗಮದಲ್ಲಿದೆ, ಇದು ಮಂಗಳೂರಿನ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಹಾಗೆಯೇ, ಶಕ್ತಿ, ಧೈರ್ಯ ಮತ್ತು ಸಾಮರಸ್ಯಗಳು ಒಟ್ಟು ಸೇರುವುದಕ್ಕೂ ಸಾಕ್ಷಿಯಾಗಿ ನಿಂತಿದೆ.
ಈ ಸುಲ್ತಾನ್ ಬತ್ತೇರಿಯಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮತ್ತು ಮೊಗವೀರ ಮಹಾ ಸಭಾ, ಬೋಳಾರ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯಾತ್ರೆಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಜ್ಯೋತಿ ಚೇಳ್ಯಾರು ನೇತೃತ್ವದಲ್ಲಿ, ಮೊಗವೀರ ಮಹಾ ಸಭಾದ ಅಧ್ಯಕ್ಷ ಯಶವಂತ ಮೆಂಡನ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ತನ್ನ ಜನರೆಲ್ಲರನ್ನು ಒಗ್ಗೂಡಿಸಿ ಪೋರ್ಚುಗೀಸ್ ಆಕ್ರಮಣಕಾರರನ್ನು ವೀರಾವೇಶದಿಂದ ಹೋರಾಡಿ ಸೋಲಿಸಿದ ಉಳ್ಳಾಲದ ರಾಣಿ ಅಬ್ಬಕ್ಕ (1525-1570) ಅವರಿಗೆ ಡಾ. ಯು. ಶೈಲಾ ಗೌರವ ಸಲ್ಲಿಸಿದರು. ಫೆಲ್ಸಿ ಲೋಬೋ ಮತ್ತು ವಿಲಿತಾ ಲೋಬೋ ಕೊಂಕಣಿ ಕವನ ಹಾಡಿದರು, ರತ್ನಾವತಿ ಬೈಕಾಡಿ ತುಳು ಹಾಡುಗಳನ್ನು ಪ್ರಸ್ತುತಪಡಿಸಿದರು. ಯಶವಂತ್ ಮೆಂಡನ್ ಅವರು ಮೀನುಗಾರರ ಜೀವನಶೈಲಿಯನ್ನೂ, ಮತ್ತು ಧಾರ್ಮಿಕ ವಿಭಜನೆಯನ್ನು ಮೀರಿ ಕಾರ್ಮಿಕ ವರ್ಗದ ಸಾಮರಸ್ಯದ ಸಹಬಾಳ್ವೆ, ಹೋರಾಟಗಳು ಮತ್ತು ಶ್ರಮವನ್ನೂ ನಿರೂಪಿಸಿದರು. ಪ್ರಸನ್ನ ಹಾಗೂ ಡಾ.ಸಬಿಹಾ ಭೂಮಿಗೌಡ ಅವರು ಮಾತನಾಡಿದರು. ಕಲಾವಿದ ಪ್ರದೀಪ್ ಸ್ಥಳವನ್ನು ಅಲಂಕರಿಸಿ ಅಡಿಕೆ ಎಲೆಗಳಲ್ಲಿ ಫಲಕಗಳನ್ನು ಸಿದ್ಧಪಡಿಸಿದ್ದರು. ಮೊಗವೀರ ಮಹಾಸಭೆಯ ಬೆಂಬಲದೊಂದಿಗೆ ಜಗದೀಶ್ ಬೋಳಾರ್ ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡಿದ್ದರು.
ಸಂಜೆ 6.30ಕ್ಕೆ ಸುಲ್ತಾನ್ ಬತ್ತೇರಿಯಿಂದ ನದಿಯಾಚೆಗಿನ ತಣ್ಣೀರುಬಾವಿ ಕಡಲತೀರ
ಸುಲ್ತಾನ್ ಬತ್ತೇರಿಯಲ್ಲಿ ನಡೆದ ಕಾರ್ಯಕ್ರಮದ ನಂತರ ಮೊಗವೀರ ಮಹಾಸಭಾದವರು ಒದಗಿಸಿದ ದೋಣಿಗಳಲ್ಲಿ ಯಾತ್ರಿಗಳು ಪಾಲ್ಗೊಂಡು ನೇತ್ರಾವತಿ-ಗುರುಪುರ ನದಿಗಳನ್ನು ದಾಟಿ ತಣ್ಣೀರಬಾವಿ ಕಡಲತೀರವನ್ನು ತಲುಪಿದರು. ಅಲ್ಲಿ ಕರಾವಳಿ ಬ್ಯಾರಿ ಕಲಾವಿದರ ಸಂಘದಿಂದ ಹುಸೇನ್ ಕಾಟಿಪಳ್ಳ ಮತ್ತು ಯು.ಎಚ್.ಖಾಲಿದ್ ಉಜಿರೆ, ನೇತೃತ್ವದಲ್ಲಿ, ನಾಡಿನ ಖ್ಯಾತ ಗಾಯಕರಾದ ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ ಅವರ ಸಹಯೋಗದೊಂದಿಗೆ ಸೂರ್ಯಾಸ್ತದ ವೇಳೆಗೆ ಸೌಹಾರ್ದ ಗಾಯನವನ್ನು ಏರ್ಪಡಿಸಲಾಗಿತ್ತು. ಅಗತ್ಯ ವ್ಯವಸ್ಥೆಗಳನ್ನು ಹಿತೈಷಿಗಳು ಪ್ರಾಯೋಜಿಸಿದ್ದರು.
ಮಂಗಳೂರಿನ ಸಹಾಯಕ ಪೊಲೀಸ್ ಕಮಿಷನರ್ (ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ) ಶ್ರೀ ಮಹೇಶ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಾಥಾ ಮತ್ತು ಅದರ ಆದರ್ಶಗಳನ್ನು ಶ್ಲಾಘಿಸಿದ ಅವರು, ಐಕ್ಯತೆ, ಸಹೋದರತ್ವ ಮತ್ತು ಶಾಂತಿಯನ್ನು ಬಲಪಡಿಸಲು ಕರೆ ನೀಡಿದರು ಮತ್ತು ಈ ಗುರಿಗಳನ್ನು ಸಾಧಿಸಲು ಇಂತಹದೇ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆ ನೀಡಿದರು. ಪ್ರಸನ್ನ, ಡಾ.ಸಿದ್ದನಗೌಡ ಪಾಟೀಲ್, ಡಾ.ಸಬಿಹಾ ಭೂಮಿಗೌಡ, ಅಬುಧಾಬಿಯ ಬ್ಯಾರಿ ವೆಲ್ಫೇರ್ ಫೋರಂ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್, ಡಾ.ಜಾಕೀರ್ ಯೂಸುಫ್ ಹುಸೇನ್, ಅಯಾಜ್ ಕೈಕಂಬ, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಮಾಜಿ ಕಾರ್ಪೋರೇಟರ್ ಕೆ.ಪಿ.ಪಣಿಕ್ಕರ್ ಮಾತನಾಡಿದರು. ಗಣೇಶ್, ರೋನಿ ಕ್ರಾಸ್ತಾ, ರಿಶಾಲ್ ಕ್ರಾಸ್ತಾ, ಮುಹಮ್ಮದ್ ಇಕ್ಬಾಲ್, ಅಶ್ಫಾಕ್ ಕಾಟಿಪಳ್ಳ, ಫೈಜ್ ಕಾಟಿಪಳ್ಳ, ಖಾಲಿದ್, ಮನೋಹರ್, ಅಜರ್ ದಾಜಿನ್ ಮತ್ತಿತರರು ಕನ್ನಡ, ತುಳು, ಕೊಂಕಣಿ, ಬ್ಯಾರಿ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾಮರಸ್ಯದ ಹಾಡುಗಳನ್ನು ಹಾಡಿದರು. ಸಮದ್ ಕಾಟಿಪಳ್ಳ ಅವರು ಕಾರ್ಯಕ್ರಮ ನಿರೂಪಿಸಿದರು.
ಮೂರು ಗಂಟೆಗಳ ಕಾಲ ನಡೆದ ಈ ಸ್ಮರಣೀಯ ಕಾರ್ಯಕ್ರಮದೊಂದಿಗೆ ಮಂಗಳೂರಿನಲ್ಲಿ ನಡೆದ ಯಾತ್ರೆಯ ಮೊದಲ ದಿನವು ಅತ್ಯಂತ ಫಲಪ್ರದವಾಗಿ ಕೊನೆಗೊಂಡಿತು.
ದಿನ 2 – ಡಿಸೆಂಬರ್ 3, ಭಾನುವಾರ
ಬೆಳಗ್ಗೆ 9.00- ಬ್ರಹ್ಮ ಬೈದರ್ಕಳ ಗರಡಿ, ನಾಗೋರಿ
ಮಂಗಳೂರಿನ ನಾಗೋರಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಎರಡನೇ ದಿನದ ಯಾತ್ರೆಯು ಆರಂಭಗೊಂಡಿತು. ಈ ಕ್ಷೇತ್ರವು ತುಳುನಾಡು ಪ್ರದೇಶದ ಅವಳಿ ವೀರರಾದ ಕೋಟಿ ಮತ್ತು ಚೆನ್ನಯ್ಯ (1556-1591) ಅವರಿಗೆ ಸಮರ್ಪಿತವಾದ ಕ್ಷೇತ್ರವಾಗಿದೆ. ಅದರ ಆವರಣದಲ್ಲಿ ಮಹಾತ್ಮ ಗಾಂಧಿಯವರಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯವಿದೆ, ಅಲ್ಲಿ ಅವರ ವಿಗ್ರಹಕ್ಕೆ ಪ್ರತಿದಿನವೂ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಶ್ರೀ ಗರಡಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯು ಶ್ರೀ ಚಿತ್ತರಂಜನ್, ಶ್ರೀ ಕಿಶೋರ್ ಕುಮಾರ್ ಮತ್ತು ಶ್ರೀ ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ಸ್ಥಳೀಯ ಯುವಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ವ್ಯವಸ್ಥಾಪನಾ ಸಮಿತಿಯ ವತಿಯಿಂದ ಜಾಥಾದಲ್ಲಿ ಪಾಲ್ಗೊಂಡವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಯಾತ್ರಿಗಳಿಗೆ ಗಾಂಧಿ ಮೂರ್ತಿಯ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ಅರ್ಚಕರು ದೇವಾಲಯ ಸಂಕೀರ್ಣದ ಮಹತ್ವ ಮತ್ತು ಅಲ್ಲಿ ನಡೆಯುವ ಆಚರಣೆಗಳನ್ನು ವಿವರಿಸಿದರು.
ಪ್ರವೀಣ್ ಕುಮಾರ್ ಮತ್ತು ಮಮತಾ ಅವರು ಗಾಂಧಿ ಭಜನೆ ಹಾಡಿದರು. ರಂಗಭೂಮಿ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ವಾಣಿ ಪೆರಿಯೋಡಿ ಅವರು ಗಾಂಧಿ ಕಥನ ಪ್ರಸ್ತುತಪಡಿಸಿದರು. ಯಾತ್ರಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ವತಿಯಿಂದ ಮಾಡಲಾಗಿತ್ತು.
ಬೆಳಗ್ಗೆ 10.00 ಗಂಟೆ – ಶ್ರೀ ವೈದ್ಯನಾಥ ದೈವಸ್ಥಾನ, ಕರ್ಮಿಸ್ತಾನ:
ಗರಡಿ ಕ್ಷೇತ್ರದಿಂದ ಹೊರತು ಭತ್ತದ ಗದ್ದೆಗಳ ಬದಿಯಲ್ಲಿ ಸಂಚರಿಸಿದ ಜಾಥಾವು ಜೆಪ್ಪಿನಮೊಗರು ಕರ್ಮಿಸ್ತಾನದ ಶ್ರೀ ವೈದ್ಯನಾಥ ದೈವಸ್ಥಾನವನ್ನು ತಲುಪಿತು. ಮಾರ್ಗದುದ್ದಕ್ಕೂ ಪ್ರೀತಿ, ಸೌಹಾರ್ದತೆ, ದೇಶಭಕ್ತಿ ಸಾರುವ ಗೀತೆಗಳನ್ನು ಹಾಡಲಾಯಿತು. ಜೆಪ್ಪಿನಮೊಗರು ಮತ್ತು ಕರ್ಮಿಸ್ತಾನ ಪ್ರದೇಶಗಳು ಐವತ್ತು ಮತ್ತು ಅರವತ್ತರ ದಶಕದಲ್ಲಿ ಕಾರ್ಮಿಕರು ಮತ್ತು ರೈತರ ಚಳುವಳಿಗಳು ಬಹಳ ಸಕ್ರಿಯವಾಗಿದ್ದ ನೆಲವಾಗಿದ್ದವು. ಮಾರ್ಗದುದ್ದಕ್ಕೂ ಆ ಕಾಲದ ರೈತ-ಕಾರ್ಮಿಕ ಚಳುವಳಿಯ ಮುಖಂಡರಾಗಿದ್ದ ಲಿಂಗಪ್ಪ ಸುವರ್ಣ, ಸಿಂಪ್ಸನ್ ಸೋನ್ಸ್, ನಾರಾಯಣ ಮೈಸೂರು, ಮೋನಪ್ಪ ಶೆಟ್ಟಿ ಮೊದಲಾದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀ ವೈದ್ಯನಾಥ ದೈವಸ್ಥಾನ, ಕರ್ಮಿಸ್ತಾನದಲ್ಲಿ ಜೆಪ್ಪಿನಮೊಗರು ಯುವಕ ಮಂಡಲದ ಸಹಯೋಗದಲ್ಲಿ ವ್ಯವಸ್ಥಾಪನಾ ಸಮಿತಿಯು ಕಾರ್ಯಕ್ರಮವನ್ನು ಆಯೋಜಿಸಿತ್ತು. ಶ್ರೀ ಪ್ರಭಾಕರ ಶ್ರೀಯಾನ್, ಕಾರ್ಪೊರೇಟರ್ ಶ್ರೀ ನಾಗೇಂದ್ರ, ಶ್ರೀ ಎಂಜಿ ಹೆಗಡೆ, ಮತ್ತು ಮಾಜಿ ಕಾರ್ಪೋರೇಟರ್ ಶ್ರೀ ಪ್ರೇಮಚಂದ್ ಇದಕ್ಕೆ ಮುತುವರ್ಜಿ ವಹಿಸಿದ್ದರು.
ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ, ದೇವಸ್ಥಾನದ ಹಿರಿಯ ಶ್ರೀ ಭುಜಂಗ ಶೆಟ್ಟಿ ಅವರು ದೈವಸ್ಥಾನದ ಸಂಪ್ರದಾಯಗಳನ್ನು ವಿವರಿಸಿದರು ಮತ್ತು ನಾಥ ಪಂಥದೊಂದಿಗೆ ಅದರ ಸಂಬಂಧಗಳನ್ನು ವಿವರಿಸಿದರು. ಈ ಆಚರಣೆಗಳು ಕೃಷಿ ಪದ್ಧತಿಗಳೊಂದಿಗೆ ಹೇಗೆ ಆಳವಾಗಿ ಹೆಣೆದುಕೊಂಡಿವೆ ಮತ್ತು ಸ್ಥಳೀಯ ದೈವಗಳೇ ಹೇಗೆ ಅಲ್ಲಿನ ಸರ್ವೋಚ್ಚ ದೇವರುಗಳಾಗಿದ್ದಾರೆ ಎನ್ನುವುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಅವರು, ಈ ಸ್ಥಳೀಯ ಆಚಾರ-ವಿಚಾರಗಳನ್ನು ಅರ್ಥಮಾಡಿಕೊಂಡು, ಗ್ರಾಮೀಣ ಸಂಪ್ರದಾಯ ಮತ್ತು ಆಚರಣೆಗಳನ್ನು ಉಳಿಸಿಕೊಂಡು ಹೆಚ್ಚು ಸಾಮರಸ್ಯದ ಬಾಳ್ವೆಗಾಗಿ ಅವುಗಳೊಂದಿಗೆ ಏಕತೆಯಿಂದ ಕೆಲಸ ಮಾಡುವ ಅಗತ್ಯವನ್ನು ನೆನಪಿಸಿದರು. ವ್ಯವಸ್ಥಾಪನಾ ಸಮಿತಿ ವತಿಯಿಂದ ಉಪಾಹಾರವನ್ನೂ ಏರ್ಪಡಿಸಲಾಗಿತ್ತು.
10.40 ಕ್ಕೆ ಜಾಥಾದಲ್ಲಿ ಭಾಗವಹಿಸಿದವರು ಜೆಪ್ಪಿನಮೊಗರು ಯುವಕ ಮಂಡಲದ ದಶಕಗಳಷ್ಟು ಹಳೆಯದಾದ ಕಚೇರಿಗೆ ಭೇಟಿ ನೀಡಿದರು. ಜೆಪ್ಪಿನಮೊಗರುನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ವಯಂಪ್ರೇರಿತರಾಗಿ ದುಡಿದ ಸ್ವಾಗತ ಸಮಿತಿಯ ಸದಸ್ಯರಾದ ಶ್ರೀ ಎಂ.ಜಿ.ಹೆಗಡೆಯವರು ಯುವಕ ಮಂಡಲದ ಪದಾಧಿಕಾರಿಗಳನ್ನು ಪರಿಚಯಿಸಿದರು ಮತ್ತು ಸಂಘದ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು, ಅವರ ಸಹಾಯಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಬೆಳಗ್ಗೆ 11.20- ದಿವಂಗತ ಶ್ರೀ ಜೆಪ್ಪು ರಾಮಪ್ಪ ಸ್ಮಾರಕ.
ದಿವಂಗತ ಶ್ರೀ ಜೆ. ರಾಮಪ್ಪ ಅವರು ತಮ್ಮ ಹೊಟೇಲಿನಲ್ಲಿ ದುಡಿಯುವ ಜನರಿಗೆ ಮತ್ತು ಬಡವರಿಗೆ ಅತಿ ಕಡಿಮೆ ದರದಲ್ಲಿ ಊಟವಿತ್ತು, ಅನೇಕ ಬಡವರಿಗೆ ಧನ ಸಹಾಯ ಮಾಡಿದ ಪರೋಪಕಾರಿಯಾಗಿದ್ದು, ನಗರದಲ್ಲಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದರು. ಶ್ರೀರಾಮಪ್ಪನವರ ಕುಟುಂಬದ ಸದಸ್ಯರು ಶ್ರೀ ನಾಗೇಂದ್ರ ಮತ್ತು ಶ್ರೀ ಸೋನಿ ನೇತೃತ್ವದಲ್ಲಿ ಜಾಥಾವನ್ನು ಸ್ವಾಗತಿಸಿದರು. ಶ್ರೀ ಸುರೇಶ್ ಕುಮಾರ್ ಮತ್ತು ಶ್ರೀ ಸೋನಿ ಅವರ ಮಾರ್ಗದರ್ಶನದಲ್ಲಿ ರಾಮಪ್ಪ ಅವರ ಸ್ಮಾರಕವನ್ನು ಅಲಂಕರಿಸಲಾಗಿತ್ತು. ಪ್ರಸನ್ನ, ಡಾ.ಸಿದ್ದನಗೌಡ ಪಾಟೀಲ್, ಡಾ.ಸಬಿಹಾ ಭೂಮಿಗೌಡ ನೇತೃತ್ವದಲ್ಲಿ ಯಾತ್ರಿಕರು ಶ್ರೀ ರಾಮಪ್ಪ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಯಾತ್ರೆಯಲ್ಲಿ ಭಾಗವಹಿಸಿದವರನ್ನು ಶ್ರೀ ರಾಮಪ್ಪ ಅವರ ಕುಟುಂಬದ ಸದಸ್ಯರು ಅವರ ಹಳೆಯ, ಭವ್ಯವಾದ, ಸಾಂಪ್ರದಾಯಿಕ ಹಳ್ಳಿಯ ಮನೆಗೆ ಕರೆತಂದರು. ಮನೆಯ ಮುಂದೆ ಮಾತನಾಡಿದ ಶ್ರೀ ಎಂ.ಜಿ.ಹೆಗಡೆಯವರು, ಶ್ರೀರಾಮಪ್ಪನವರು ಸಹಸ್ರಾರು ಜನರಿಗೆ ಅನಿಯಮಿತವಾದ ಭೋಜನವನ್ನು ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಉಣಬಡಿಸುವ ಮೂಲಕ ದುಡಿಯುವ ಜನರನ್ನು ಬೆಂಬಲಿಸಿದ್ದರು, ಸಾಮಾಜಿಕ ಸಂಬಂಧಗಳು ಮತ್ತು ಸಾಮರಸ್ಯವನ್ನು ಕಾಪಾಡುವಲ್ಲಿ ಅನ್ನವೇ ಅತಿ ಮಹತ್ವದ ಪಾತ್ರ ವಹಿಸಿದೆ ಎಂದು ಒತ್ತಿ ಹೇಳಿದರು. ಡಾ ಉದಯ್ ಕುಮಾರ್ ಇರ್ವತ್ತೂರ್ ಅವರು ಬಡ ಕುಟುಂಬಗಳಿಗೆ ಸೇರಿದ್ದ ತಮ್ಮ ಅನೇಕ ಸಹಪಾಠಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಶ್ರೀರಾಮಪ್ಪನವರು ಸಹಾಯ ಮಾಡಿದ್ದರು ಎಂದು ನೆನಪಿಸಿಕೊಂಡರು. ಪ್ರಸನ್ನ ಮಾತನಾಡಿ, ರಾಮಪ್ಪ ಅವರಂತಹ ವ್ಯಕ್ತಿಗಳು ಪ್ರಾಮಾಣಿಕವಾಗಿ ಜನರಿಗೆ ಸೇವೆ ಸಲ್ಲಿಸಿದರು, ಆದರೆ ಯಾವುದೇ ವೈಭವದಿಂದ ದೂರವಿದ್ದರು ಎಂದು ಗೌರವ ಸಲ್ಲಿಸಿದರು.
ಯಾತ್ರಿಗಳಿಗೆ ಸಜ್ಜಿಗೆ-ಬಜಿಲ್, ಸ್ಥಳೀಯ ಪರಿಭಾಷೆಯಲ್ಲಿ ‘ಕಾಂಕ್ರೀಟ್’, ಮತ್ತು ಚಹಾದೊಂದಿಗೆ ಪ್ರೀತಿಯಿಂದ ಉಪಚರಿಸಲಾಯಿತು. ಸಜ್ಜಿಗೆಯ ಉಪ್ಪಿಟ್ಟು ಮತ್ತು ಮಸಾಲೆ ಹಾಕಿದ ಅವಲಕ್ಕಿಯ ಮಿಶ್ರಣವನ್ನು ಸ್ಥಳೀಯವಾಗಿ ಕಾಂಕ್ರೀಟ್ ಎಂದೇ ಕರೆಯಲಾಗುತ್ತದೆ; ಇದು ಕಾರ್ಮಿಕ ವರ್ಗದ ಸಾಂಪ್ರದಾಯಿಕ ಉಪಹಾರವಾಗಿದ್ದು, ಕಾವ್ಯಾತ್ಮಕವಾಗಿ ಭಿನ್ನ ಭಕ್ಷ್ಯಗಳ ಮಿಶ್ರಣವು, ಒಟ್ಟಿಗೆ ಬೆರೆಸಿದಾಗ ಹೇಗೆ ಬಲವಾಗಿರುತ್ತದೆ ಎನ್ನುವುದನ್ನು ಪ್ರತಿನಿಧಿಸುತ್ತದೆ.
ಮಧ್ಯಾಹ್ನ 12.30ಕ್ಕೆ ಹರ್ಬರ್ಟ್ ಡಿ ಸೋಜಾ ಅವರ ತೋಟ
ಹರ್ಬರ್ಟ್ ಡಿ ಸೋಜಾ ಅವರು ಪ್ರಗತಿಪರ ಕೃಷಿಕರು, ಅವರು ಕ್ರಿಶ್ಚಿಯನ್ ಸಮುದಾಯದ ಹೊಸ ಸುಗ್ಗಿಯ ಹಬ್ಬಕ್ಕೆ ಹಾಗೂ ಮಂಗಳೂರು ಮತ್ತು ಸುತ್ತಮುತ್ತಲಿನ ವಿವಿಧ ದೇವಸ್ಥಾನಗಳಲ್ಲಿ ನಡೆಯುವ ತೆನೆ ಹಬ್ಬಗಳಿಗೆ ಉಚಿತವಾಗಿ ಭತ್ತದ ತೆನೆಯನ್ನು ಒದಗಿಸುವವರು, ಆ ಮೂಲಕ ಸಮುದಾಯಗಳ ನಡುವಿನ ಸಾಂಪ್ರದಾಯಿಕ ಬಾಂಧವ್ಯ ಮತ್ತು ಸಹಬಾಳ್ವೆಯ ಪರಂಪರೆಯನ್ನು ಪ್ರತಿನಿಧಿಸುವವರು. ಢಾಯಿ ಆಖರ್ ಪ್ರೇಮ್ ಜಾಥಾದಲ್ಲಿ ಭಾಗವಹಿಸಿದವರು ಶ್ರೀ ಡಿಸೋಜಾ ಅವರ ಅನುಭವಗಳನ್ನು ಕೇಳಿ ಸಂವಾದ ನಡೆಸಿದರು ಮತ್ತು ಅವರ ಔದಾರ್ಯವನ್ನು ಶ್ಲಾಘಿಸಿದರು.
ಮಧ್ಯಾಹ್ನ 2.30ಕ್ಕೆ ದೋಣಿಯಲ್ಲಿ ಹರೇಕಳಕ್ಕೆ
ಜಾಥಾವು ಕಡೇಕಾರ್-ಜೆಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ನದಿಯ ದಡಕ್ಕೆ ನಡೆದು ಗ್ರೆಗೊರಿ ಡಿಸೋಜಾ ಏರ್ಪಡಿಸಿದ್ದ ದೋಣಿಯಲ್ಲಿ ಏರಿತು. ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು ಹಾಡುಗಳನ್ನು ಹಾಡುತ್ತಾ, ಯಾತ್ರಿಗಳು ದೋಣಿಯಲ್ಲಿ ನದಿಯನ್ನು ದಾಟಿದರು, ಕಿಲೋಮೀಟರ್ ಉದ್ದದ ನೇತ್ರಾವತಿ ಸೇತುವೆಯ ಕೆಳಗಡೆಯಿಂದ, ಕುದ್ರುಗಳನ್ನು ಸುತ್ತಿ, ಅಲ್ಲಿನ ಮ್ಯಾನ್ ಗ್ರೋವ್ ದಾಟಿ ಇನ್ನೊಂದು ದಡದಲ್ಲಿರುವ ಹರೇಕಳವನ್ನು ತಲುಪಿದರು.
ಮಧ್ಯಾಹ್ನ 3.30ಕ್ಕೆ ಮೈಮೂನಾ ಡೇರಿ, ಹರೇಕಳ
ಯಾತ್ರಿಗಳು ಹರೇಕಳದ ಮೈಮೂನಾ ಡೈರಿಯನ್ನು ತಲುಪಿದಾಗ ಶ್ರೀಮತಿ ಮೈಮುನಾ, ಅವರ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಯಾತ್ರಿಗಳಿಗೆ ರುಚಿಕರವಾದ ಊಟವನ್ನು ಏರ್ಪಡಿಸಲಾಗಿತ್ತು. ಅದರ ನಂತರ, ಶ್ರೀಮತಿ ಮೈಮುನಾ ಮತ್ತು ಮಗಳು ಮರ್ಜಿನ್ ಅವರು ಡೈರಿಯ ಹುಟ್ಟು ಮತ್ತು ಬೆಳವಣಿಗೆಯನ್ನು ವಿವರಿಸಿದರು, ಕಡು ಕಷ್ಟದ ದಿನಗಳಿಂದ, ಬೀಡಿಗಳನ್ನು ಸುತ್ತಿ ಜೀವನ ನಡೆಸುತ್ತಿದ್ದ ದಿನಗಳಿಂದ, ಮೈಮೂನಾ ಅವರ ಪತಿ ನಿಧನರಾದ ನಂತರ ಕೇವಲ 4 ವರ್ಷಗಳಲ್ಲಿ ಈ ಹೈನೋದ್ಯಮವನ್ನು ಯಶಸ್ವಿಯಾಗಿ ಬೆಳೆಸಲಾಯಿತು ಎಂಬುದನ್ನು ವಿವರಿಸಿದರು. ಜಾನುವಾರುಗಳನ್ನು ಸಾಕಬೇಕೆಂಬ ಮೈಮೂನಾ ಅವರ ಪತಿಯ ಕನಸುನ್ನು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಸಾಕಾರಗೊಳಿಸಿ, ಈಗ 62 ಹಸುಗಳನ್ನು ಹೊಂದಿರುವ ಫಾರ್ಮ್ ಅನ್ನು ನಿರ್ಮಿಸಲಾಯಿತೆನ್ನುವುದನ್ನು ಮಾಡುವಾಗ ಇದು ಗ್ರಾಮೀಣ ಉದ್ಯಮಶೀಲತೆಗೆ ಅತ್ಯುತ್ತಮ ಮಾದರಿಯಾಗಿದೆ ಎಂದೆನಿಸುವುದು ಸಹಜವೇ ಆಗಿದೆ. ಮೈಮೂನಾ ಅವರು ಈ ಶ್ರಮದಿಂದ ಅನೇಕ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸಿದ್ದಲ್ಲದೆ, ತಮ್ಮ ಲಾಭದ ಅರ್ಧದಷ್ಟು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ, ಬಡವರಿಗೆ ಆಹಾರ ಮತ್ತು ಶಿಕ್ಷಣಕ್ಕಾಗಿ ದಾನ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಜಾನುವಾರುಗಳ ಸಂಖ್ಯೆಯನ್ನು 100 ಕ್ಕೆ ಹೆಚ್ಚಿಸಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದಾರೆ. ಪ್ರಸನ್ನ, ಡಾ ಸಿದ್ದನಗೌಡ ಪಾಟೀಲ, ಡಾ ಸಬಿಹಾ, ಅಮ್ಜದ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.
ಸಂಜೆ 5.00 – ಪದ್ಮಶ್ರೀ ಹರೇಕಳ ಹಾಜಬ್ಬ ನಿರ್ಮಿಸಿರುವ ನೂತನ ಪಡ್ಪು ಶಾಲೆಗೆ ಭೇಟಿ
ಹರೇಕಳ ಪಂಚಾಯತ್ ಕಛೇರಿ ಮೂಲಕ ಸಂಚರಿಸಿದ ಯಾತ್ರಿಗಳು ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ನಿರ್ಮಿಸಿರುವ ನೂತನ ಪಡ್ಪು ಶಾಲೆಗೆ ಭೇಟಿ ನೀಡಿದರು. ಅನಕ್ಷರಸ್ಥರಾಗಿದ್ದು ಹಣ್ಣು ಮಾರಾಟಗಾರರಾಗಿದ್ದ ಶ್ರೀ ಹರೇಕಳ ಹಾಜಬ್ಬ ಅವರು ತಮ್ಮ ಗ್ರಾಮದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಬೇಕೆಂಬ ಛಲದಿಂದ ತಮ್ಮದೇ ಹಣದಲ್ಲಿ ಈ ಶಾಲೆಯನ್ನು ನಿರ್ಮಿಸಿದರು. ಈ ಶಾಲೆಗೆ ಭೇಟಿ ನೀಡಿದ್ದು ಎಲ್ಲಾ ಯಾತ್ರಿಗಳಿಗೆ ನಿಜಕ್ಕೂ ಶ್ರೀಮಂತವಾದ, ಧನ್ಯತೆಯ, ಅನುಭವವಾಗಿತ್ತು.
ಯಾತ್ರಿಗಳಿಗೆ ರಾತ್ರಿಯ ತಂಗುವಿಕೆ ಮತ್ತು ಊಟದ ವ್ಯವಸ್ಥೆಯನ್ನು ಸಮೀಪದ ನಾಟೆಕಲ್‌ನ ಹಿತೈಷಿಯೋರ್ವರು ಮಾಡಿದ್ದರು.
ದಿನ 3- ಡಿಸೆಂಬರ್ 4, ಸೋಮವಾರ
ಬೆಳಗ್ಗೆ 9.30 – ನಾಟೆಕಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ
ಮೂರನೇ ದಿನದ ಯಾತ್ರೆಯು ನಾಟೆಕಲ್‌ನ ಪ್ರೌಢಶಾಲೆಯ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದದೊಂದಿಗೆ ಪ್ರಾರಂಭವಾಯಿತು. ಕುಟುಂಬಗಳು ಮತ್ತು ವ್ಯಕ್ತಿಗತ ಸಂಬಂಧಗಳು ಬ್ರಹ್ಮಾಡದೊಂದಿಗೆ ಬೆಸೆದಿರುವ ಬಗೆಯನ್ನು ಪ್ರಸನ್ನ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು ಮತ್ತು ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧಗಳು ಹೇಗೆ ಬದಲಾಗುತ್ತಿವೆ ಎನ್ನುವುದನ್ನೂ, ಆಧುನಿಕ ಯಂತ್ರಗಳಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಅನುಸರಿಸಿ, ವಾಸ್ತವದೊಂದಿಗೆ ಸಂಬಂಧ ಸಾಧಿಸಿ, ಸಹಾನುಭೂತಿಯ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ಡಾ ಸಿದ್ದನಗೌಡ ಪಾಟೀಲ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು ಮತ್ತು ಇಪ್ಟಾ ಯಾತ್ರಿಗಳು ಪ್ರೀತಿ ಮತ್ತು ಶಾಂತಿಯುತ ಸಹಬಾಳ್ವೆಯ ಗೀತೆಗಳನ್ನು ಹಾಡಿದರು.
ಬೆಳಗ್ಗೆ 11.00 – ಮಂಗಳಗಂಗೋತ್ರಿ – ಮಂಗಳೂರು ವಿಶ್ವವಿದ್ಯಾಲಯ
ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರವು ಭಾರತೀಯ ಸಂತ ಸಂಪ್ರದಾಯಗಳ ಕುರಿತು ಪ್ರಸನ್ನ ಅವರಿಂದ ಉಪನ್ಯಾಸ-ಸಂವಾದವನ್ನು ಏರ್ಪಡಿಸಿತ್ತು. ಪ್ರಭಾರಿ ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಸೋಮಣ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೊ.ಸಬಿಹಾ ಭೂಮಿಗೌಡ, ಪ್ರೊ.ಶಿವರಾಮ ಶೆಟ್ಟಿ, ಇತರೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗ್ಗೆ 11.30- ಅಸೈಗೋಳಿ: ಸಹಕಾರ ಚಳುವಳಿಯ ಕುರಿತು ಸಂವಾದ
ಜಾಥಾವು ನಡೆದು ಅಸೈಗೋಳಿಗೆ ತಲುಪಿದಾಗ ಕೊಣಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಶೌಕತ್ ಅಲಿ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಕೊಣಾಜೆ ಗ್ರಾಹಕರ ಸಹಕಾರಿ ಸಂಘ ಹಾಗೂ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಗೂ ಕೊಣಾಜೆಯ ಆಶಾ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಲಾಯಿತು. ಡಾ ಸಿದ್ದನಗೌಡ ಪಾಟೀಲ್, ಅಮ್ಜದ್, ಷಣ್ಮುಖಸ್ವಾಮಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಸಂಜೆ 4.00 – ಕೊಣಾಜೆ ಯುವಕ ಮಂಡಲ
ಬಳಿಕ ಯಾತ್ರೆಯು ಅಸೈಗೋಳಿಯಿಂದ ಮುಂದುವರಿದು ಕೊಣಾಜೆಯನ್ನು ತಲುಪಿತು. ಅಲ್ಲಿ ಜಿಲ್ಲೆಯ ಪ್ರಮುಖ ಸಾಮಾಜಿಕ ಹೋರಾಟಗಾರರಾದ ಶ್ರೀ ಇಬ್ರಾಹಿಂ ಕೋಡಿಜಾಲ್ ರವರಿಂದ ಕೊಣಾಜೆ ಯುವಕ ಮಂಡಲದ ಆಶ್ರಯದಲ್ಲಿ ಯುವಕರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಡಾ ಸಿದ್ದನಗೌಡ ಪಾಟೀಲ್, ಅಮ್ಜದ್, ಷಣ್ಮುಖಸ್ವಾಮಿ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ದಿನ 4 – ಡಿಸೆಂಬರ್ 5, ಮಂಗಳವಾರ
ಬೆಳಗ್ಗೆ 9.30-ಮಧ್ಯಾಹ್ನ 1- ಮುಡಿಪು ಜನ ಶಿಕ್ಷಣ ಟ್ರಸ್ಟ್
ಮುಡಿಪುವಿನ ಜನ ಶಿಕ್ಷಣ ಟ್ರಸ್ಟ್ ಗ್ರಾಮೀಣ ಜನತೆಯಲ್ಲಿ, ವಿಶೇಷವಾಗಿ ಹಿಂದುಳಿದ ಕೊರಗ ಬುಡಕಟ್ಟು ಸಮುದಾಯದಲ್ಲಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ, ಅನೇಕ ವರ್ಷಗಳಿಂದ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ. ನಾಲ್ಕನೇ ದಿನದ ಯಾತ್ರೆಯು ಬೆಳಗ್ಗೆ ಮುಡಿಓ ತಲುಪಿದಾಗ ಅಬೂಬಕರ್ ಜಲ್ಲಿ ಮತ್ತು ಸುಧೀರ್ ಬಾಳೆಪುಣಿ ನೇತೃತ್ವದ ನಲಿಕೆ (ಜಾನಪದ ನೃತ್ಯ) ತಂಡದಿಂದ ಡೊಳ್ಳು, ದುಡಿಯೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಜನ ಶಿಕ್ಷಣ ಟ್ರಸ್ಟ್‌ನ ಸಂಯೋಜಕರಾದ ಶೀನ ಶೆಟ್ಟಿ ಅವರು ಯಾತ್ರಿಕರನ್ನು ಔಪಚಾರಿಕವಾಗಿ ಸ್ವಾಗತಿಸಿ ಟ್ರಸ್ಟ್‌ನ ಚಟುವಟಿಕೆಗಳನ್ನು ಪರಿಚಯಿಸಿದರು. ಸದಸ್ಯರು ಮತ್ತು ಫಲಾನುಭವಿಗಳು ತಮ್ಮ ಚಟುವಟಿಕೆಗಳ ವಿವರಗಳನ್ನು ಪ್ರಸ್ತುತಪಡಿಸಿದರು, ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು ಮತ್ತು ಹಾಡುಗಳನ್ನು ಹಾಡಿದರು. ಪ್ರಸನ್ನ, ಡಾ.ಸಿದ್ದನಗೌಡ ಪಾಟೀಲ ಮತ್ತಿತರ ಯಾತ್ರಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಜನ ಶಿಕ್ಷಣ ಟ್ರಸ್ಟ್‌ನ ಸಂಯೋಜಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ಚಿತ್ತಾರ ಬಳಗದ ಚಂದ್ರಶೇಖರ ಪಾತೂರು, ಸತೀಶ್ ಇರಾ, ನಾಗೇಶ ಕಲ್ಲೂರು ಅವರು ಉಪಾಹಾರವನ್ನು ಒದಗಿಸಿದ್ದರೆ, ಬಾಳೆಪುಣಿಯ ಜನಜೀವನ ಸಂಸ್ಥೆಯ ರಮೇಶ್ ಶೇಣವ ಅವರು ಊಟದ ವ್ಯವಸ್ಥೆ ಮಾಡಿದ್ದರು. ಶಿವಪ್ರಸಾದ್ ಆಳ್ವ, ಇಬ್ರಾಹಿಂ ತಪ್ಸ್ಯ ಮತ್ತು ಹೈದರ್ ಕೈರಂಗಳ ಈ ಕಾರ್ಯಕ್ರಮವನ್ನು ಸಂಯೋಜಿಸುವಲ್ಲಿ ಸಹಕರಿಸಿದ್ದರು.
ಸಂಜೆ 4 ಗಂಟೆಗೆ: ಬಂಗಾರಗುಡ್ಡೆ – ಭೈರ ಸಮುದಾಯದೊಂದಿಗೆ ಸಂವಾದ
ಬಳಿಕ ಹಳ್ಳಿಯ ಕಾಲುದಾರಿಯಲ್ಲಿ ಸಾಗಿದ ಜಾಥಾ ಭೈರ ಸಮುದಾಯದವರು ವಾಸಿಸುವ ಬಂಗಾರಗುಡ್ಡೆಯನ್ನು ತಲುಪಿತು. ಕರ್ನಾಟಕ ಇಪ್ಟಾದ ಡಾ.ಸಿದ್ದನಗೌಡ ಪಾಟೀಲ್, ಷಣ್ಮುಖಸ್ವಾಮಿ, ಸಮುದಾಯ ಕರ್ನಾಟಕದ ಸಿ.ಎನ್.ಗುಂಡಣ್ಣ ಮತ್ತಿತರರು ಆದಿವಾಸಿಗಳೊಂದಿಗೆ ಸಂವಾದ ನಡೆಸಿದರು.
ಸಂಜೆ 5.30- ಕುಲಾಲ ಸಂಘ, ಕುರ್ನಾಡು, ಮುಡಿಪು
ಆ ಬಳಿಕ ಕುರ್ನಾಡು ತಲುಪಿದ ಜಾಥಾವು ಕುರ್ನಾಡಿನ ಕುಲಾಲ್ ಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಅವರ ಶತಮಾನೋತ್ಸವ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿತು. ಡಾ ಬಾಳಪ್ಪ ಅವರ ಸಂಬಂಧಿ ಶ್ರೀ ರವೀಂದ್ರನಾಥ್ ಮತ್ತು ಡಾ ಬಾಳಪ್ಪ ಅವರ ಮೊಮ್ಮಗ ತೇಜಸ್ವಿ ರಾಜ್ ಅವರು ಡಾ ಬಾಳಪ್ಪ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
ನಂತರ ಪುತ್ತೂರಿನ ಕುಂಬಾರರ ಸಹಕಾರಿ ಸಂಘದ ಸದಸ್ಯರು ಕುಂಬಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ದಕ್ಷಿಣ ಕನ್ನಡ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಪುತ್ತೂರಿನ ಕುಂಬಾರರ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಎಂ ಪೆರುವಾಯಿ ಮತ್ತು ಸಿಇಒ ಜನಾರ್ಧನ ಅವರು ಮಡಕೆ ತಯಾರಿಕೆಯ ಸವಾಲುಗಳು ಮತ್ತು ಅವಕಾಶಗಳ ಕುರಿತು ಸಂವಾದವನ್ನು ನಡೆಸಿಕೊಟ್ಟರು. ಪ್ರಸನ್ನ, ಡಾ.ಸಿದ್ದನಗೌಡ ಪಾಟೀಲ ಮತ್ತು ಇತರರು ಭಾಗವಹಿಸಿದ್ದರು.
ಇದರ ನಂತರ ಪ್ರಸಿದ್ಧ ಗಾಯಕ-ಕಲಾವಿದ ನಾದಾ ಮಣಿನಾಲ್ಕೂರು ಅವರಿಂದ ಕಡ್ತಲ ಹಾಡುಗಳು ಪ್ರಸ್ತುತಿ ನಡೆಯಿತು.
ದಿನ 5 – ಡಿಸೆಂಬರ್ 6, ಬುಧವಾರ
ಬೆಳಿಗ್ಗೆ 10 ಗಂಟೆಗೆ ಹೂಹಾಕುವ ಕಲ್ಲು
ಐದನೇ ದಿನದ ಜಾಥಾವು ಮುಡಿಪು ಬಳಿಯ ಹೂಹಾಕುವ ಕಲ್ಲು ಎಂಬಲ್ಲಿನ ಹೂವಿನ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಪುನರಾರಂಭವಾಯಿತು. ದಂತಕಥೆಯ ಪ್ರಕಾರ ಕಣಂತೂರಿನ ದೈವವು ಬೆಟ್ಟಗಳ ಪ್ರದೇಶದಿಂದ ಕರಾವಳಿ ಪ್ರದೇಶಕ್ಕೆ ಇಳಿದು ಮೊದಲಲ್ಲಿ ಈ ಕಲ್ಲಿನ ಮೇಲೆ ಕುಳಿತುಕೊಂಡು, ಬಳಿಕ ಕಣಂತೂರಿನಲ್ಲಿ ನೆಲೆಯಾಯಿತು.
ಬೆಳಗ್ಗೆ 11.30ಕ್ಕೆ ಕಣಂತೂರು ಶ್ರೀ ತೋಡುಕುಕ್ಕಿನಾರ್ ದೈವಸ್ಥಾನ
ಜಾಥಾವು ಕಣಂತೂರು ಶ್ರೀ ತೋಡುಕುಕ್ಕಿನಾರ್ ದೈವಸ್ಥಾನಕ್ಕೆ ಸಾಗಿತು. ಐತಿಹ್ಯದಂತೆ, ಈ ದೈವಸ್ಥಾನವು ಮಹಿಳೆಯರ ಜೀವನ ಸಂಘರ್ಷ ಮತ್ತು ವಿಜಯಗಳನ್ನು ಬಿಂಬಿಸುವ ದೈವಗಳ ನೆಲೆಯಾಗಿದೆ. ಜಾಥಾವು ತಲುಪಿದಾಗ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ದೇವಿಪ್ರಸಾದ್ ಪೊಯ್ಯತ್ತಬೈಲ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ದೈವಸ್ಥಾನದ ಕಾಂತ ಅವರು ದೈವಸ್ಥಾನದ ದೇವತೆಗಳ ಹಿಂದಿನ ದಂತಕಥೆಯನ್ನು ನಿರೂಪಿಸುವ ಪಾಡ್ದನಗಳನ್ನು ಪ್ರಸ್ತುತಪಡಿಸಿದರು. ಚಂದ್ರಹಾಸ ಕಣಂತೂರು ಅವರು ಅವುಗಳ ಅರ್ಥವನ್ನು ಬಿಡಿಸಿ, ಸ್ಥಳದ ಐತಿಹ್ಯ ಹಾಗೂ ಅದರ ಸುತ್ತಲಿನ ಆಚರಣೆಗಳನ್ನು ವಿವರಿಸಿದರು. ದೈವಸ್ಥಾನದ ಆವರಣದಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ 800 ವರ್ಷಗಳಿಗಿಂತಲೂ ಹಳೆಯದಾದ ಮಾವಿನ ಮರವನ್ನು ಶ್ರೀ ದೇವಿಪ್ರಸಾದ್ ಪೊಯ್ಯತ್ತಬೈಲ್ ಅವರು ತೋರಿಸಿದರು ಮತ್ತು ಆ ಮರದಿಂದ ಎಲೆಯನ್ನು ಸಹ ಕತ್ತರಿಸುವುದಿಲ್ಲ ಮತ್ತು ಅದು ತನ್ನ ನೈಸರ್ಗಿಕ ವೈಭವದಿಂದ ಸುಸ್ಥಿರವಾಗಿ ಉಳಿದಿದೆ ಎಂದು ವಿವರಿಸಿದರು. ಗ್ರಾಮೀಣ ಸಮಸ್ಯೆಗಳು, ನಂಬಿಕೆಗಳು ಮತ್ತು ಸುಸ್ಥಿರ ಅಭಿವೃದ್ಧಿಯ ಸುತ್ತ ಕೇಂದ್ರೀಕೃತವಾಗಿ ಸಂವಾದಗಳು ನಡೆದವು. ಎಲ್ಲಾ ಯಾತ್ರಿಗಳಿಗೆ ಆಡಳಿತ ಮೊಕ್ತೇಸರರು ಮತ್ತು ಆಡಳಿತ ಮಂಡಳಿಯ ಪರವಾಗಿ ಮಧ್ಯಾಹ್ನದ ಊಟವನ್ನು ಏರ್ಪಡಿಸಲಾಗಿತ್ತು.
ಸಂಜೆ 4.00 ಗಂಟೆಗೆ ಪೊಯ್ಯತಬೈಲ್ ಜುಮಾ ಮಸೀದಿ ಮತ್ತು ಮಣವತಿ ಬೀವಿ ದರ್ಗಾ
ಯಾತ್ರಿಗಳು ಕಣಂತೂರಿನಿಂದ ಭತ್ತದ ಗದ್ದೆಗಳ ಬದುವಿನ ಮೇಲಿನ ಹಾದಿಯಾಗಿ ಪೊಯ್ಯತ್ತಬೈಲ್ ಜುಮಾ ಮಸೀದಿ ಹಾಗೂ ಮಣವತಿ ಬೀವಿ ದರ್ಗಾ ತಲುಪಿದರು. ಈ ಅತ್ಯಂತ ಹಳೆಯ ಪ್ರಾರ್ಥನಾಲಯಗಳು ಮತಾತೀತವಾಗಿ ಜನರನ್ನು ಆಕರ್ಷಿಸುತ್ತವೆ, ಮಣವತಿ ಬೀವಿಯನ್ನು ಎಲ್ಲರೂ ಬಡವರ ಮತ್ತು ದೀನದಲಿತರ ಸಂರಕ್ಷಕರಾಗಿ ಪರಿಗಣಿಸುತ್ತಾರೆ.
ಯಾತ್ರಿಗಳನ್ನು ಮಸೀದಿ ವ್ಯವಸ್ಥಾಪನಾ ಸಮಿತಿ ಹಾಗೂ ಸ್ಥಳೀಯ ಜನರ ಪರವಾಗಿ ಇಸ್ಮಾಯಿಲ್ ಟಿ ಸ್ವಾಗತಿಸಿದರು. ಅಲ್ಲಿನ ವಿದ್ಯಾರ್ಥಿಗಳು ಯಾತ್ರಿಗಳಿಗೆ ವಿಧ್ಯು ಲ್ಕ್ತ ಸ್ವಾಗತ ನೀಡಿದರು. ಡಾ ಇಸ್ಮಾಯಿಲ್ ಅವರು ಈ ದೇವಾಲಯಗಳಲ್ಲಿ ಶತಮಾನಗಳ ಹಳೆಯ ಸಂಪ್ರದಾಯಗಳನ್ನು ವಿವರಿಸಿದರು, ಶಾಂತಿಯುತ ಸಹಬಾಳ್ವೆ ಮತ್ತು ಸಾಮರಸ್ಯವನ್ನು ಪ್ರತಿಬಿಂಬಿಸುವ ಪ್ರದೇಶದ ಕೂಡು ಸಂಸ್ಕೃತಿಗಳನ್ನು ವಿವರಿಸಿದರು. ಪ್ರಸನ್ನ ಅವರು ಮಾತನಾಡಿ, ಕರ್ನಾಟಕ ಮತ್ತು ಕೇರಳ ಗಡಿ ಪ್ರದೇಶದಲ್ಲಿ ವಿವಿಧ ಧರ್ಮ, ಭಾಷೆ ಮತ್ತು ಸಂಸ್ಕೃತಿಯ ಜನರು ಸಾಮರಸ್ಯ ಮತ್ತು ಶಾಂತಿಯುತ ಜೀವನ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು, ಸಂತರು ಮತ್ತು ಸೂಫಿಗಳು ಧರ್ಮ ಮತ್ತು ಪಂಗಡಗಳನ್ನು ಮೀರಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮವನ್ನು ಡಾ ಇಸ್ಮಾಯಿಲ್ ಎನ್ ಸಂಯೋಜಿಸಿದ್ದರು.
ದಿನ 6 – ಡಿಸೆಂಬರ್ 7, 2023
ಬೆಳಗ್ಗೆ 10.30
ಅರಸು ಮಂಜಿಷ್ಣಾರ್ ದೈವಸ್ಥಾನ ಮಾಡ ಮತ್ತು ಸಾವಿರ ಜಮಾತ್ ಮಸೀದಿ, ಉದ್ಯಾವರ.
ಅರಸು ಮಂಜಿಷ್ಣಾರ್ ದೈವಸ್ಥಾನ ಮಾಡ ಮತ್ತು ಸಾವಿರ ಜಮಾತ್ ಮಸೀದಿ, ಉದ್ಯಾವರ ಸುಮಾರು 900 ವರ್ಷಗಳಿಂದ ಸಾಮರಸ್ಯದ ಸಹಬಾಳ್ವೆ ಮತ್ತು ಸಹ ಆಚರಣೆಗಳ ಪರಂಪರೆಗಳ ದ್ಯೋತಕವಾಗಿವೆ. ಈ ದೇವಾಲಯಗಳಲ್ಲಿನ ವಾರ್ಷಿಕ ಆಚರಣೆಗಳು ಎರಡೂ ದೇವಾಲಯಗಳ ಹಿರಿಯರನ್ನು ಒಳಗೊಂಡಿರುತ್ತವೆ, ಒಂದರ ಉಪಸ್ಥಿತಿಯಿಲ್ಲದೆ ಇನ್ನೊಂದು ನಡೆಯುವುದಿಲ್ಲ.
ದೈವಸ್ಥಾನದ ವಾರ್ಷಿಕ ಆಚರಣೆಗೆ ಧಾರ್ಮಿಕ ವಿಧಿಗಳ ಮುಖ್ಯಸ್ಥರು ಮಸೀದಿಯ ಸದಸ್ಯರನ್ನು ವಿಧ್ಯುಕ್ತವಾಗಿ ಆಹ್ವಾನಿಸುತ್ತಾರೆ. ವಿಶೇಷ ದಿನದಂದು ದೈವಸ್ಥಾನದ ಮುಖ್ಯಸ್ಥರು ಮತ್ತು ಹತ್ತು ಸಮುದಾಯಗಳ ಮುಖಂಡರೊಂದಿಗೆ ದೈವ ಪಾತ್ರಿ ಅವರು ಮಸೀದಿಗೆ ಮೆರವಣಿಗೆಯಲ್ಲಿ ಹೋಗುತ್ತಾರೆ. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಲಾಗುತ್ತದೆ ಮತ್ತು ಮಸೀದಿ ಸಮಿತಿಯಿಂದ ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ಮಸೀದಿಯಲ್ಲಿ ಉತ್ಸವಾಚರಣೆಗಳಿರುವಾಗ ದೇವಾಲಯದ ವತಿಯಿಂದ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಮಸೀದಿಗೆ ಕಳುಹಿಸಲಾಗುತ್ತದೆ.
ಕೊನೆಯ ದಿನದ ಯಾತ್ರೆಯು ಅರಸು ಮಂಜಿಷ್ಣಾರ್ ದೈವಸ್ಥಾನಕ್ಕೆ ಆಗಮಿಸಿದಾಗ ದೈವಸ್ಥಾನದ ಧರ್ಮದರ್ಶಿಗಳು, ಹಿರಿಯರು ಹಾಗೂ ಯಾತ್ರೆಯ ಸ್ವಾಗತ ಸಮಿತಿಯವರು ಸ್ವಾಗತಿಸಿದರು. ಸ್ವಾಗತ ಸಮಿತಿ ಪರವಾಗಿ ಬಿ.ವಿ.ರಾಜನ್ ಯಾತ್ರಿಗಳನ್ನು ಸ್ವಾಗತಿಸಿದರು. ದೈವಸ್ಥಾನದ ಅರ್ಚಕರು ಹಾಗೂ ಮಸೀದಿಯ ಹಿರಿಯರು ದೈವಸ್ಥಾನದ ಧಾರ್ಮಿಕ ವಿಧಿ ವಿಧಾನಗಳನ್ನು ವಿವರಿಸಿದರು. ಯಾತ್ರಿಗಳಿಗೆ ದೈವಸ್ಥಾನದ ವತಿಯಿಂದ ಉಪಾಹಾರವನ್ನು ಏರ್ಪಡಿಸಲಾಗಿತ್ತು.
11.30 ಸುರೇಂದ್ರ ಕೋಟ್ಯಾನ್ ಅವರ ಗ್ರಂಥಾಲಯ
ಪುಸ್ತಕ ಪ್ರೇಮಿ ಸುರೇಂದ್ರ ಕೋಟ್ಯಾನ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ 10 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಸುಮಾರು 10000 ಪುಸ್ತಕಗಳನ್ನು ಸಂಗ್ರಹಿಸಿ ತಮ್ಮ ಗ್ರಾಮದಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಢಾಯಿ ಆಖರ್ ಪ್ರೇಮ್ ಯಾತ್ರಿಗಳು ಈ ವಿಶೇಷ ಗ್ರಂಥಾಲಯಕ್ಕೆ ಭೇಟಿ ನೀಡಿದರು ಮತ್ತು ಜನರಿಗೆ ಜ್ಞಾನವನ್ನು ಹರಡಲು ಸುರೇಂದ್ರ ಕೋಟ್ಯಾನ್ ಅವರ ಏಕವ್ಯಕ್ತಿ ಪ್ರಯತ್ನವನ್ನು ಶ್ಲಾಘಿಸಿದರು.
ಮಧ್ಯಾಹ್ನ 12.00
ನಂತರ ಯಾತ್ರೆಯು ಉದ್ಯಾವರ ಸಾವಿರ ಜಮಾತ್ ಮಸೀದಿ ತಲುಪಿತು. ಮಸೀದಿಯ ಮಾಜಿ ಕಾರ್ಯದರ್ಶಿ ಮೊಯಿಯುದ್ದೀನ್, ಅರಸು ಮಂಜಿಷ್ಣಾರ್ ದೈವಸ್ಥಾನ ಮತ್ತು ಉದ್ಯಾವರ ಮಸೀದಿ ಎರಡರಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಲು ಬಹಳ ಆಸಕ್ತಿ ವಹಿಸಿದ್ದರು. ಅವರು ಮಸೀದಿಯ ಕಾರ್ಯಚಟುವಟಿಕೆ ಮತ್ತು ಎರಡೂ ದೇವಾಲಯಗಳ ಕೂಡು ಸಂಸ್ಕೃತಿಗಳು ಮತ್ತು ಆಚರಣೆಗಳ ಬಗ್ಗೆ ವಿವರಿಸಿದರು. ಮಸೀದಿಯು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ನಡೆಸುವ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆಯೂ ಅವರು ವಿವರಿಸಿದರು. ಮಸೀದಿ ಸಮಿತಿ ವತಿಯಿಂದ ಯಾತ್ರಿಕರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನ 2.30 – ಗಿಳಿವಿಂಡು
ಢಾಯಿ ಆಖರ್ ಪ್ರೇಮ್ ಜಾಥಾವು ಉದ್ಯಾವರ ಮಸೀದಿಯುಂದ ಹೊರಟು ತನ್ನ ಅಂತಿಮ ತಾಣವಾದ ಗಿಳಿವಿಂಡು ತಲುಪಿತು. ಇದು ರಾಷ್ಟ್ರಕವಿ ಎಂ. ಗೋವಿಂದ ಪೈ ಅವರ ನೆನಪಿಗಾಗಿ ಕೇರಳದ ಕಾಸರಗೋಡಿನ ಮಂಜೇಶ್ವರದಲ್ಲಿರುವ ಅವರ ಅಂದಿನ ನಿವಾಸದಲ್ಲಿ ಸ್ಥಾಪಿಸಲಾದ ಸಾಂಸ್ಕೃತಿಕ ಕೇಂದ್ರವಾಗಿದೆ. 1949 ರಲ್ಲಿ ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಗೌರವಕ್ಕೆ ಪಾತ್ರರಾದ ಶ್ರೀ ಗೋವಿಂದ ಪೈ ಅವರು ಬಹುಭಾಷಾ ವಿದ್ವಾಂಸರೂ, ಕವಿಗಳೂ ಆಗಿದ್ದರು..
ಯಾತ್ರಿಗಳನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಜಯಾನಂದ, ಸ್ವಾಗತ ಸಮಿತಿಯ ಸಂಯೋಜಕ ಬಿ.ವಿ.ರಾಜನ್, ಗಿಳಿವಿಂಡು ಸಂಸ್ಥೆಯ ಕಾರ್ಯದರ್ಶಿ ಉಮೇಶ್ ಸಾಲಿಯಾನ್ ಔಪಚಾರಿಕವಾಗಿ ಸ್ವಾಗತಿಸಿದರು. ಊಟದ ನಂತರ, ಸಂಜೆ 4.00 ಗಂಟೆಗೆ, 6 ದಿನಗಳ ಜಾಥಾದ ಸಮಾರೋಪ ಕಾರ್ಯಕ್ರಮವು ಎಂ.ಗೋವಿಂದ ಪೈ ಅವರ ಪ್ರತಿಮೆಯ ಮುಂಭಾಗದಲ್ಲಿ ನಡೆಯಿತು.
ಸ್ವಾಗತ ಸಮಿತಿಯ ಅಧ್ಯಕ್ಷ ಜಯಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಇಪ್ಟಾ, ಕೇರಳ ರಾಜ್ಯ ಘಟಕದ ಅಧ್ಯಕ್ಷ ಬಾಲನ್ ಜಾಥಾವನ್ನು ಮೆಚ್ಚಿ ಮಾತನಾಡಿದರು. ಪ್ರಸನ್ನ ಅವರು ತಮ್ಮ ಸಮಾರೋಪ ಭಾಷಣದಲ್ಲಿ, ಯಂತ್ರಗಳು ಮತ್ತು ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಬಳಕೆಯಿಂದ ಕಾರ್ಮಿಕ ವರ್ಗವು ಹೇಗೆ ವೇಗವಾಗಿ ಕಣ್ಮರೆಯಾಗುತ್ತಿದೆ, ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳ ರಚನೆಗೆ ಗಂಭೀರ ಸವಾಲು ಎದುರಾಗಿದೆ, ಜೊತೆಗೆ ಕಾರ್ಮಿಕ ವರ್ಗದ ಏಕತೆ ಮತ್ತು ಚಳುವಳಿಗಳನ್ನು ಅಪ್ರಸ್ತುತಗೊಳಿಸಿ ನಿಷ್ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ವಿವರಿಸಿದರು. ಡಾ.ಸಬಿಹಾ ಭೂಮಿಗೌಡ ಅವರು ಕೋಶ ಓದು, ದೇಶ ಸುತ್ತು ಎಂಬ ಕನ್ನಡ ಗಾದೆಯನ್ನು ಉಲ್ಲೇಖಿಸಿ, 6 ದಿನಗಳ ಜಾಥಾವು ಯಾವುದೇ ಪುಸ್ತಕಗಳಿಂದ ಎಂದಿಗೂ ಪಡೆಯಲಾಗದ ಜ್ಞಾನ ಮತ್ತು ಅನುಭವವನ್ನು ನೀಡುವ ಮೂಲಕ ಪ್ರತಿಯೊಬ್ಬ ಭಾಗವಹಿಸುವವರ ಜೀವನವನ್ನು ಹೇಗೆ ಶ್ರೀಮಂತಗೊಳಿಸಿದೆ ಎಂಬುದನ್ನು ವಿವರಿಸಿದರು. . ನಾಗೇಶ್ ಕಲ್ಲೂರ್ ಮಾತನಾಡಿ, ಇಡೀ ಜಾಥಾವನ್ನು ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನದಿಂದ ಹೇಗೆ ಆಯೋಜಿಸಲಾಯಿತು ಮತ್ತು ಪ್ರತಿ ಸ್ಥಳೀಯ ಕಾರ್ಯಕ್ರಮದ ಉತ್ಸಾಹಿ ಸಂಘಟಕರು ಹೇಗೆ ಸ್ವಯಂ ಖರ್ಚು ಮಾಡಿದರು ಎನ್ನುವುದನ್ನು ವಿವರಿಸಿದರು ಮತ್ತು ಅರ್ಥಪೂರ್ಣವಾದ, ಜನಪರ ಚಟುವಟಿಕೆಗಳಿಗೆ ಸರ್ವರೂ ಕೈಜೋಡಿಸುತ್ತಾರೆ ಎನ್ನುವುದನ್ನು ಈ ಪ್ರಯತ್ನವು ತೋರಿಸಿಕೊಟ್ಟಿದೆ ಎಂದು ಹೇಳಿದರಲ್ಲದೆ, ಯಾವುದೇ ದೊಡ್ಡ ವ್ಯಕ್ತಿಗಳಿಂದ ಅಥವಾ ಕಾರ್ಪೊರೇಟ್‌ಗಳಿಂದ ನೆರವನ್ನು ಪಡೆಯುವ ಅಗತ್ಯವಿಲ್ಲ ಎನ್ನುವುದನ್ನೂ ಈ ಯಾತ್ರೆ ತೋರಿಸಿಕೊಟ್ಟಿದೆ ಎಂದರು.
ನಂತರ ಡಿ.6 ಮತ್ತು 7ರಂದು ಗಿಳಿವಿಂಡುವಿನಲ್ಲಿ ಪ್ರಸನ್ನ ಅವರು ನಡೆಸಿಕೊಟ್ಟ ರಂಗಭೂಮಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಪೃಥ್ವಿ ಎಂಬ ನಾಟಕವನ್ನು ಪ್ರಸ್ತುತಪಡಿಸಿದರು, ಅದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಆರು ದಿನಗಳ ಕಾಲ ನಡೆದ ಢಾಯಿ ಆಕರ್ ಪ್ರೇಮ್ – ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾವು ಕರ್ನಾಟಕದ ಮಂಗಳೂರಿನಿಂದ ಕೇರಳದ ಮಂಜೇಶ್ವರದವರೆಗೆ ಸಾಗಿ, ಅದರ ಘೋಷವಾಕ್ಯವಾದ ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್ ಎಂಬುದನ್ನು ಸಾಕಾರಗೊಳಿಸಿತು, ಯೋಜಿಸಿದ್ದಕ್ಕಿಂತ ಬಹು ಹೆಚ್ಚಿನದನ್ನು ಸಾಧಿಸಿತು. ಎಲ್ಲಾ ಜನ ವಿಭಾಗಗಳವರು ರಾಜಕೀಯ, ಮತೀಯ, ಪ್ರಾದೇಶಿಕ ಭಾವನೆಗಳನ್ನೆಲ್ಲ ತ್ಯಜಿಸಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಎಲ್ಲಾ ಖರ್ಚು, ಊಟ ಮತ್ತು ವಸತಿಯನ್ನು ಸಂತೋಷದಿಂದ ಒದಗಿಸಿದರು. ಎಲ್ಲಿಯೂ ಯಾವುದೇ ತೊಂದರೆಗಳಿಲ್ಲದೆ, ಯಾವುದೇ ಪೊಲೀಸರ ಭದ್ರತೆಯಿಲ್ಲದೆ, ಯಾವುದೇ ಅಹಿತಕರ ಘಟನೆಗಳು ಅಥವಾ ಯಾವುದೇ ಭಾಗದಿಂದ ವಿರೋಧದ ಧ್ವನಿಗಳಿಲ್ಲದೆ ನಡೆದ ಯಾತ್ರೆಯು ಭಾಗವಹಿಸಿದ ಎಲ್ಲರಿಗೆ ಎಂದೆಂದಿಗೂ ಸ್ಮರಣೀಯವೆನಿಸುವ ಅನುಭವವಾಗಿ ಉಳಿಯಲಿದೆ, ನಮ್ಮ ಜನರು, ಅವರ ಸಂಸ್ಕೃತಿಗಳು, ಭಾಷೆಗಳು, ಧರ್ಮಗಳು, ಜ್ಞಾನ ವೈವಿಧ್ಯಗಳು ಮತ್ತು ಪರಂಪರೆಯನ್ನು ಸಂಭ್ರಮಿಸಲು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಅವರೆಲ್ಲರನ್ನು ಪ್ರೋತ್ಸಾಹಿಸುವುದು ಖಚಿತವಾಗಿದೆ.